ಭೋಪಾಲ್: ಮಾಡೆಲ್ ತ್ವಿಷಾ (Twisha Sharma) ಶರ್ಮಾ ಸಾವಿನ(Death Case) ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯೆಯೇ, ಆಕೆಯ ಅತ್ತೆ ಹಾಗೂ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್(Giribala Singh) ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಹೊಸ ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗಿರಿಬಾಲಾ ಸಿಂಗ್ ಸದ್ಯ ಜೈಲಿನಲ್ಲಿದ್ದು, ಅವರ ನಿವಾಸದಲ್ಲಿ ನಡೆದ ಕಳ್ಳತನದ ಹಿಂದೆ ಸಾಕ್ಷ್ಯ ನಾಶ ಮಾಡುವ ಉದ್ದೇಶವಿದೆಯೇ ಎಂಬ ಅನುಮಾನವನ್ನು ತ್ವಿಷಾ ಕುಟುಂಬ ವ್ಯಕ್ತಪಡಿಸಿದೆ.
ಶನಿವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಗಿರಿಬಾಲಾ ಸಿಂಗ್ ನಿವಾಸಕ್ಕೆ ಕಳ್ಳರು ನುಗ್ಗಿದ್ದಾರೆ. ಘಟನೆ ನಡೆದ ವೇಳೆ ಗಿರಿಬಾಲಾ ಅವರ ಸಹೋದರ ಹಾಗೂ ನಿವೃತ್ತ ಕರ್ನಲ್ ರಣವೀರ್ ಸಿಂಗ್ ಭದೋರಿಯಾ ಮನೆಯಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳು ಮನೆಯ ಹಿಂಬಾಗಿಲಿನಿಂದ ಮೊದಲ ಮಹಡಿಗೆ ಪ್ರವೇಶಿಸಿದ್ದು, ಇನ್ನಿಬ್ಬರು ಹೊರಗಡೆ ಕಾವಲು ನಿಂತಿದ್ದರು. ಕಳ್ಳರು ಚಿನ್ನದ ಸರ, ಬೆಳ್ಳಿಯ ವಸ್ತುಗಳು, ಬಟ್ಟೆಗಳು ಸೇರಿದಂತೆ ಕೆಲವು ವಸ್ತುಗಳನ್ನು ಕಳವು ಮಾಡಿದ್ದಾರೆ. ಆದರೆ ಇದೇ ವೇಳೆ ಪೊಲೀಸ್ ಗಸ್ತು ವಾಹನದ ಸೈರನ್ ಕೇಳುತ್ತಿದ್ದಂತೆ ಆತಂಕಗೊಂಡ ಕಳ್ಳರು, ಕಳವು ಮಾಡಿದ ಕೆಲವು ವಸ್ತುಗಳಿದ್ದ ಬ್ಯಾಗ್‌ನ್ನೇ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಬೆನ್ನಟ್ಟಿದರೂ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: Twisha Sharma Case: ಪತಿ, ಅತ್ತೆಯನ್ನು ಮನೆಗೆ ಕರೆತಂದು ಅಪರಾಧ ದೃಶ್ಯ ಮರುಸೃಷ್ಟಿ ಮಾಡಿದ ಸಿಬಿಐ
ಕಳ್ಳತನದ ಬಳಿಕ ತ್ವಿಷಾ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಇದು ಕೇವಲ ಕಳ್ಳತನವಲ್ಲ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಸಾಕ್ಷ್ಯಗಳನ್ನು ನಾಶಪಡಿಸುವ ಯತ್ನವಾಗಿರಬಹುದು ಎಂದು ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ ಆರೋಪಿಸಿದ್ದಾರೆ. ಪ್ರಕರಣದ ಸ್ಥಳದಲ್ಲಿರುವ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಅವರು ಸಿಬಿಐಗೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು, ಕಳ್ಳರು ಯಾವುದೇ ದಾಖಲೆ ಅಥವಾ ಕಡತಗಳನ್ನು ಕಳವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಕಳ್ಳತನದ ಪ್ರಕರಣದ ತನಿಖೆ ಮುಂದುವರಿದಿದೆ.
ತ್ವಿಷಾ ಶರ್ಮಾ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯಾಗಿದ್ದು, 2025ರ ಡಿಸೆಂಬರ್‌ನಲ್ಲಿ ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮೇ 12ರಂದು ಪತಿಯ ಮನೆಯಲ್ಲಿ ತ್ವಿಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ಆರೋಪ ಕೇಳಿಬಂದಿದ್ದು, ಇಬ್ಬರೂ ಬಂಧನಕ್ಕೊಳಗಾಗಿ ಸದ್ಯ ಭೋಪಾಲ್ ಕೇಂದ್ರ ಕಾರಾಗೃಹದಲ್ಲಿದ್ದಾರೆ.ಇದನ್ನೂ ಓದಿ: Twisha Sharma Case | ಅತ್ತೆ ವಿಧಿವಿಜ್ಞಾನ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ – ಹೈಕೋರ್ಟ್
