-ಖಾಸಗಿ ಕ್ಷೇತ್ರದ ಆತಿಥ್ಯ ಪರಿಣತಿಯೊಂದಿಗೆ ಉನ್ನತೀಕರಣ
ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ ಆತಿಥ್ಯ ಕೇಂದ್ರಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ಉನ್ನತೀಕರಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬುಧವಾರ (ಜು.22) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ನಂದಿಗಿರಿಧಾಮದಲ್ಲಿ (Nandi Hills) ಕೆಎಸ್‌ಟಿಡಿಸಿಯಿಂದ ನಿರ್ಮಿಸಲಾದ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಅತ್ಯಂತ ಸುಂದರ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಎಸ್‌ಟಿಡಿಸಿ ಹಾಗೂ ಜಂಗಲ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ಸ್ ಆಸ್ತಿಗಳಿದ್ದರೂ, ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ. ಉತ್ತಮ ನಿರ್ವಹಣೆ, ಆಧುನಿಕ ಸೌಲಭ್ಯಗಳು, ವೃತ್ತಿಪರ ಆತಿಥ್ಯ ಸೇವೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಚರಣಾ ಪದ್ಧತಿಗಳನ್ನು ಅಳವಡಿಸುವ ಮೂಲಕ ಈ ಆಸ್ತಿಗಳಿಗೆ ಹೊಸ ಮೆರುಗು ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: IPL ಸಂಸ್ಥಾಪಕ ಲಲಿತ್ ಮೋದಿ ಭಾರತಕ್ಕೆ ವಾಪಸ್ ಸುಳಿವು
ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರವಾಸೋದ್ಯಮ ಇಲಾಖೆ ಮತ್ತು ತಾಜ್ ಸಂಸ್ಥೆಯ ಸಹಯೋಗದ ಅನುಭವವು ಸರ್ಕಾರಿ ಆತಿಥ್ಯ ಕ್ಷೇತ್ರದಲ್ಲಿ ವೃತ್ತಿಪರ ನಿರ್ವಹಣೆಯ ಮಹತ್ವವನ್ನು ತೋರಿಸಿದೆ. ಇದೇ ಅನುಭವದ ಆಧಾರದ ಮೇಲೆ ರಾಜ್ಯದ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಮಯೂರ ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಆಸ್ತಿಗಳಲ್ಲಿ ಖಾಸಗಿ ಆತಿಥ್ಯ ಕ್ಷೇತ್ರದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರೀಮಿಯಂ ಆತಿಥ್ಯ ಸೇವೆಗಳು ಕೇವಲ ಐಷಾರಾಮಿ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಬಾರದು. ಉತ್ತಮ ಗುಣಮಟ್ಟದ ವಸತಿ, ಆಹಾರ ಹಾಗೂ ಸೇವೆಗಳು ಮಧ್ಯಮ ವರ್ಗದ ಕುಟುಂಬಗಳಿಗೂ ಕೈಗೆಟಕುವ ದರದಲ್ಲಿ ದೊರೆಯಬೇಕು. ಪ್ರವಾಸೋದ್ಯಮವನ್ನು ಜನಸ್ನೇಹಿಯಾಗಿ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ರೂಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕೊಡಗು | ಶನಿವಾರಸಂತೆ ಸಮೀಪದ ಗ್ರಾಮದಲ್ಲಿ ಸಾಕು ನಾಯಿ ಹೊತ್ತೊಯ್ದ ಚಿರತೆ
ಮಯೂರ ಹೋಟೆಲ್‌ಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹೋಟೆಲ್ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ಪರಿಣಿತರು ಹಾಗೂ ಪ್ರವಾಸೋದ್ಯಮ ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದಿದ್ದಾರೆ.

ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಯೂರ ಹೋಟೆಲ್‌ಗಳ ವಿನ್ಯಾಸ, ಕೊಠಡಿ ಸೌಲಭ್ಯಗಳು, ಆಹಾರ ಸೇವೆ, ಕಾರ್ಯಾಚರಣೆ, ಅತಿಥಿ ಸೇವೆ ಹಾಗೂ ನಿರ್ವಹಣಾ ಗುಣಮಟ್ಟವನ್ನು ಹಂತ ಹಂತವಾಗಿ ಉನ್ನತೀಕರಿಸಲಾಗುವುದು. ಹೋಟೆಲ್‌ಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯಲಿದ್ದು, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್
ನಂದಿಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕುರಿತು ಮಾತನಾಡಿದ ಸಚಿವರು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಯಂತ್ರಿಸಿ, ಕೆಳಭಾಗದಲ್ಲಿಯೇ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ.

ಅಲ್ಲಿಂದ ಪ್ರವಾಸಿಗರ ಸಂಚಾರಕ್ಕಾಗಿ ನಿಯೋಜಿತ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್‌ವೇ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಗುಣಮಟ್ಟದ ಸೇವೆ ಹಾಗೂ ಪ್ರವಾಸಿಗರೊಂದಿಗೆ ಸೌಜನ್ಯದ ವರ್ತನೆಗೆ ಅತ್ಯುನ್ನತ ಆದ್ಯತೆ ನೀಡಬೇಕು. ‘ಅತಿಥಿ ದೇವೋ ಭವ’ ಎಂಬ ಭಾರತೀಯ ಆತಿಥ್ಯ ಸಂಸ್ಕೃತಿಯೇ ನಮ್ಮ ಸೇವೆಯ ಮೂಲಮಂತ್ರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಸ್ಪೈಡರ್‌ಮ್ಯಾನ್ ನೋಡಲು ಮುಗಿಬಿದ್ದ ಭಾರತೀಯರು; ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ
