ನವದೆಹಲಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಮುಂದುವರಿದಿರುವ ಹಿನ್ನೆಲೆ ತಮಿಳುನಾಡಿಗೆ (Tamilnadu) ತಕ್ಷಣ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ (Karnataka) ಯಾವುದೇ ನಿರ್ದೇಶನ ನೀಡದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಾತ್ಕಾಲಿಕ ರಿಲೀಫ್ ನೀಡಿದೆ.
ನವದೆಹಲಿಯಲ್ಲಿ ನಡೆದ ಪ್ರಾಧಿಕಾರದ 53ನೇ ಸಭೆಯಲ್ಲಿ ಎರಡೂ ರಾಜ್ಯಗಳ ವಾದ ಆಲಿಸಿದ ಬಳಿಕ, ಇನ್ನೂ ಒಂದು ವಾರ ಪರಿಸ್ಥಿತಿಯನ್ನು ಅವಲೋಕಿಸಿ ಜುಲೈ 28ರಂದು ನಡೆಯಲಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: `ಕಾಕ್ರೋಚ್ʼಗಳ ಮೇಲೆ ಹಿಂಸಾಚಾರ ಆರೋಪ – ಕೇಂದ್ರ ಸರ್ಕಾರ, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಸಭೆಯಲ್ಲಿ ತಮಿಳುನಾಡು ಸರ್ಕಾರ (Tamilnadu Govt) ತನ್ನ ಪಾಲಿನ ನೀರು ಸಿಗುತ್ತಿಲ್ಲ ಎಂದು ಪ್ರಬಲವಾಗಿ ವಾದ ಮಂಡಿಸಿತು. ಸುಪ್ರೀಂಕೋರ್ಟ್‌ನ (Supreme Court) 2018ರ ತೀರ್ಪಿನ ಪ್ರಕಾರ ಜೂನ್ 1ರಿಂದ ಜುಲೈ 19ರವರೆಗೆ ಬಿಲ್ಲಿಗುಂಡ್ಲುವಿಗೆ 28.3 ಟಿಎಂಸಿ ನೀರು ಹರಿಯಬೇಕಿದ್ದರೆ, ಕೇವಲ 3.4 ಟಿಎಂಸಿ ಮಾತ್ರ ಹರಿದುಬಂದಿದೆ ಎಂದು ತಿಳಿಸಿತು. ಇದರಿಂದ ಸುಮಾರು 24.8 ಟಿಎಂಸಿ ನೀರಿನ ಕೊರತೆ ಉಂಟಾಗಿದೆ ಎಂದು ಪ್ರಾಧಿಕಾರದ ಗಮನಕ್ಕೆ ತಂದಿದೆ.
ಇದೇ ವೇಳೆ, ಜುಲೈ 20ರ ವೇಳೆಗೆ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ 48.9 ಟಿಎಂಸಿ ನೀರು ಸಂಗ್ರಹವಿದ್ದರೂ, ಅವುಗಳಿಗೆ ಬಂದಿರುವ ಒಟ್ಟು ಒಳಹರಿವು ಕೇವಲ 31.6 ಟಿಎಂಸಿ ಮಾತ್ರವಾಗಿದೆ. ಇದು ಕಳೆದ 30 ವರ್ಷಗಳ ಸರಾಸರಿಯ ಶೇ.38.79ರಷ್ಟೇ ಎಂದು ತಮಿಳುನಾಡು ಉಲ್ಲೇಖಿಸಿತು. ಮೆಟ್ಟೂರು ಜಲಾಶಯದಲ್ಲಿ 36.9 ಟಿಎಂಸಿ ನೀರಿದ್ದು, ಒಳಹರಿವು ಅತ್ಯಂತ ಕಡಿಮೆಯಾಗಿದೆ ಎಂದು ಹೇಳಿ, ಕರ್ನಾಟಕವು ಬಾಕಿ ನೀರನ್ನು ಪ್ರೋ-ರಾಟಾ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಪ್ರಾಧಿಕಾರ ನಿರ್ದೇಶಿಸಬೇಕೆಂದು ಮನವಿ ಮಾಡಿದೆ.ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳದಿದ್ರೆ ಉಪವಾಸ ಸತ್ಯಾಗ್ರಹ ನಿಲ್ಲಿಸುತ್ತೇನೆ: ಕೇಂದ್ರಕ್ಕೆ ವಾಂಗ್ಚುಕ್ ಪತ್ರ
ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪ್ರತಿನಿಧಿಗಳು ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಶೇಷವಾಗಿ ಬೆಂಗಳೂರು ಸೇರಿದಂತೆ ಕುಡಿಯುವ ನೀರಿನ ಅವಶ್ಯಕತೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಿರುವ ಬಗ್ಗೆ ಆತಂಕ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆ ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಮತ್ತು ಕಾನೂನು ವ್ಯಾಪ್ತಿಯಲ್ಲಿಯೇ ಬಳಸುವಂತೆ ಎರಡೂ ರಾಜ್ಯಗಳಿಗೆ ಸೂಚನೆ ನೀಡಲಾಯಿತು. ಕೃಷಿಗಿಂತ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಜುಲೈ 26ರ ನಂತರ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಯಾವುದೇ ನಿರ್ದೇಶನ ನೀಡದೆ, ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಜುಲೈ 28ರಂದು ನಡೆಯಲಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಪ್ರೋ-ರಾಟಾ ಆಧಾರದ ಮೇಲೆ ರಾಜ್ಯಗಳ ನೀರಿನ ಹಂಚಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಪ್ರಾಧಿಕಾರ ತೀರ್ಮಾನಿಸಿದೆ.ಇದನ್ನೂ ಓದಿ: ಸಂಪುಟ ವಿಸ್ತರಣೆ ಇನ್ನೊಂದು ವಾರ ಮುಂದೂಡಿಕೆ – ಡಿಕೆಶಿಯಿಂದ 3 ಡಿಸಿಎಂ ಬ್ರಹ್ಮಾಸ್ತ್ರ..!
