– ಪೊಲೀಸರು ಮಹಿಳೆಯರ ಖಾಸಗಿ ಅಂಗಗಳ ಮೇಲೆ ದಾಳಿ ಮಾಡಿದ್ದಾರೆ; ಹಿರಿಯ ವಕೀಲ ಆರೋಪ
ನವದೆಹಲಿ: ಜುಲೈ 20ರಂದು ʻಸಂಸತ್ ಚಲೋʼ ಮೆರವಣಿಗೆ ವೇಳೆ ಸಿಜೆಪಿ (Cockroach Janata Party) ಪ್ರತಿಭಟನಾಕಾರರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್ (Delhi High Court) ಬುಧವಾರ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠವು, ಕೇಂದ್ರ ಸರ್ಕಾರ (Central Government) ಮತ್ತು ದೆಹಲಿ ಪೊಲೀಸರಿಗೆ 4 ವಾರಗಳೊಳಗೆ ಪ್ರತಿಜ್ಞಾಪತ್ರ (ಕೌಂಟರ್ ಅಫಿಡವಿಟ್) ಸಲ್ಲಿಸುವಂತೆ ಸೂಚಿಸಿದೆ.

ಇದೇ ವೇಳೆ, ಘಟನೆಗೆ ಸಂಬಂಧಿಸಿದ ಸಿಸಿಟಿವಿ (CCTV) ದೃಶ್ಯಗಳು, ವಿಡಿಯೋಗ್ರಫಿ, ಬಾಡಿ-ಕ್ಯಾಮ್ ದೃಶ್ಯಗಳು ಹಾಗೂ ಇತರೆ ಎಲ್ಲಾ ದಾಖಲೆಗಳನ್ನ ಸಂರಕ್ಷಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನ ಸೆಪ್ಟೆಂಬರ್ 11ಕ್ಕೆ ನಿಗದಿಪಡಿಸಲಾಗಿದೆ.
ದೆಹಲಿ ಪೊಲೀಸ್ (Delhi Police) ಹಾಗೂ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ವಾದ ಮಂಡಿಸಿದರೆ, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎನ್. ಹರಿಹರನ್, ಗೋಪಾಲ್ ಶಂಕರನಾರಾಯಣನ್ ಮತ್ತು ವಿಕಾಸ್ ಸಿಂಗ್ ಹಾಜರಾಗಿದ್ದರು.

ಪೊಲೀಸರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಹರಿಹರನ್ ವಾದ
ಸಿಜೆಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್. ಹರಿಹರನ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರತಿಭಟನಾಕಾರರು ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನ ಚಲಾಯಿಸುತ್ತಿದ್ದರು. ಸಾರ್ವಜನಿಕ ಸಭೆಗಳನ್ನ ನಿಯಂತ್ರಿಸುವ ಅಧಿಕಾರ ಪೊಲೀಸರಿಗೆ ಇದ್ದರೂ, ಅವರು ನಡೆಸಿದ ಬಲಪ್ರಯೋಗ ಅತಿಯಾದದ್ದು, ಜೊತೆಗೆ ಊಹಿಸಲಾಗದ ಮಟ್ಟದಲ್ಲಿತ್ತು ಎಂದು ಅವರು ವಾದಿಸಿದರು.
ಅಷ್ಟೇ ಅಲ್ಲದೇ, ಪೊಲೀಸರೇ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಖಾಸಗಿ ಅಂಗಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಇದು ಅತ್ಯಂತ ಭಯಾನಕ ಘಟನೆ. ವಿಡಿಯೋಗಳಲ್ಲಿ ಗುರುತಿಸಬಹುದಾದ ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಇಡೀ ಘಟನೆಯ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಹರಿಹರನ್ ಮನವಿ ಮಾಡಿದ್ರು.

130ಕ್ಕೂ ಹೆಚ್ಚು ವಿಡಿಯೋಗಳ ಪರಿಶೀಲನೆ
ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಘಟನೆಯ ಕುರಿತು ಸುಮಾರು 130 ವಿಡಿಯೊಗಳನ್ನು ತಮ್ಮ ತಂಡ ಪರಿಶೀಲಿಸಿದೆ. ಬಲಪ್ರಯೋಗ ನಡೆಸುತ್ತಿರುವ ಕೆಲವರು ಪೊಲೀಸ್ ಸಮವಸ್ತ್ರದಲ್ಲಿರಲಿಲ್ಲ ಹಾಗೂ ಅವರ ಬಳಿ ಯಾವುದೇ ಗುರುತಿನ ಚೀಟಿಯೂ ಇರಲಿಲ್ಲ ಎಂದು ಅವರು ಆರೋಪಿಸಿದರು.
ಇದಲ್ಲದೆ, ಒಂದು ವಿಡಿಯೋದಲ್ಲಿ ಹೆಚ್ಚುವರಿ ಡಿಸಿಪಿ ಸಂದೀಪ್ ಲಾಂಬಾ ಅವರು ಯಾವುದೇ ಪ್ರತಿರೋಧ ತೋರದ ಮಹಿಳಾ ಪ್ರತಿಭಟನಾಕಾರರಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಿಡಿಯೊಗಳಲ್ಲಿ ಹೆಚ್ಚುವರಿ ಡಿಸಿಪಿ ಸಂದೀಪ್ ಲಾಂಬಾ ಅವರು ಯಾವುದೇ ತಪ್ಪು ಮಾಡದ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಮ್ಮನ್ನು ರಕ್ಷಿಸಬೇಕಾದವರೇ ಇಂತಹ ವರ್ತನೆ ತೋರಿರುವುದು ಗಂಭೀರ ವಿಚಾರ ಎಂದು ಗಮನ ಸೆಳೆದರು.
ಈ ಬಗ್ಗೆ ನಮ್ಮ ಬಳಿ ಕೆಲವು ಪ್ರಶ್ನೆಗಳಿವೆ. ಇದು ಒಂದೇ ಒಂದು ಪ್ರತ್ಯೇಕ ಘಟನೆನಾ? ಬಹುಶಃ ಅಲ್ಲ. ಪ್ರತಿಭಟನೆ ಅಕ್ರಮ ಸಭೆಯಾಗಿದ್ದರೂ, ಅದನ್ನು ನಿಭಾಯಿಸಲು ಕಾನೂನುಬದ್ಧ ವಿಧಾನಗಳಿವೆ ಎಂದು ವಿಭಾಗೀಯ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಉದ್ದೇಶಿಸಿ ಹೇಳಿತು.
