ಗದಗ: ಅಕ್ಟೋಬರ್ 10ರೊಳಗೆ ಗದಗ (Gadag) ತಾಲೂಕನ್ನು ಬರ ಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಹೆಚ್.ಕೆ ಪಾಟೀಲ (H.K. Patil) ಎಚ್ಚರಿಸಿದ್ದಾರೆ.
ಗದಗ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕಾರವಾರ-ಕೈಗಾ ಹಾಗೂ ಗದಗದಿಂದ ಇಳಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ತಡೆದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಹೆಚ್.ಕೆ. ಪಾಟೀಲ್ ಮಾತನಾಡಿ, ಸಿಎಂ ಭೇಟಿ ನೀಡಿದ್ರೂ ಬರ ಘೋಷಿಸಿಲ್ಲ ಯಾಕೆ? ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನೇತೃತ್ವದಲ್ಲಿ ನಾವು ಅಧಿಕಾರಿಗಳ ಸಭೆ ನಡೆಸಿದ್ದೆವು. ಜಿಲ್ಲೆಯಲ್ಲಿ ತೀವ್ರ ಬರ ಬಿದ್ದಿರುವ ಸ್ಪಷ್ಟ ಚಿತ್ರಣ ನಮಗಿತ್ತು. ಅಧಿಕಾರಿಗಳ ವರದಿ ಬಳಿಕ ಖುದ್ದಾಗಿ ಮುಖ್ಯಮಂತ್ರಿಗಳೇ ಇಲ್ಲಿಗೆ ಭೇಟಿ ನೀಡಿ ಕದಾಂಪೂರದಿಂದ ಕುರ್ತಕೋಟಿವರೆಗೆ ಬೆಳೆ ವೀಕ್ಷಣೆ ಮಾಡಿದ್ದರು. ಇಷ್ಟೆಲ್ಲಾ ಆದರೂ ಗದಗ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡದೇ ಬಿಟ್ಟಿದ್ದು ಯಾಕೆ? ಇದಕ್ಕೆ ಅಡ್ಡಿ ಪಡಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.
ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಭೀಕರ ಮಳೆ ಕೊರತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಮತ್ತು ಮೋಸವನ್ನು ಸಹಿಸಲು ಸಾಧ್ಯವಿಲ್ಲ. ನಾನು ರೈತ ಕುಟುಂಬದಿಂದ ಬಂದವನು, ರೈತರ ಪರ ಇರುವವನು. ಅವರ ಕಷ್ಟ ನನಗೆ ಚೆನ್ನಾಗಿ ಗೊತ್ತು ಎಂದು ಹೇಳಿದರು. ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 1,100 ಡ್ರೋನ್‌ಗಳ ದಾಳಿ – ರಷ್ಯಾ ಮೇಲೆ ಉಕ್ರೇನ್ ಅತಿದೊಡ್ಡ ಅಟ್ಯಾಕ್
ಮುಂದಿನ ಮೂರು ದಿನಗಳಲ್ಲಿ ಅಂದರೆ ಅಕ್ಟೋಬರ್ 2ರ ಒಳಗೆ ಗದಗ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಸರ್ಕಾರ ಮಟ್ಟದಲ್ಲಿ ಏನೆಲ್ಲಾ ಪ್ರಯತ್ನ ಬೇಕೋ ಅಷ್ಟನ್ನೂ ಮಾಡುತ್ತೇನೆ. ಅದು ಸಾಧ್ಯವಾಗದಿದ್ದರೆ, ಅಕ್ಟೋಬರ್ 10 ರ ಗಡುವನ್ನು ಶಾಸನ ಸಭೆಯ ಮೂಲಕ ಸರ್ಕಾರಕ್ಕೆ ನೀಡುತ್ತೇನೆ. ಅಷ್ಟರೊಳಗೂ ಘೋಷಣೆಯಾಗದಿದ್ದರೆ ನಿಮ್ಮ ಆಜ್ಞೆಯಂತೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರೈತರ ಸಮ್ಮುಖದಲ್ಲಿ ಘೋಷಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 73 ತಾಲೂಕುಗಳಿದ್ದು, ಅದರಲ್ಲಿ ಇನ್ನು 27 ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ಈ ಎಲ್ಲಾ 27 ತಾಲೂಕುಗಳನ್ನೂ ತಕ್ಷಣವೇ ಬರ ಪೀಡಿತ ಎಂದು ಘೋಷಿಸಬೇಕು. ಇದರಲ್ಲಿ ಅನಾವಶ್ಯಕ ರಾಜಕಾರಣ ಬೆರೆಸಬಾರದು, ಒಂದು ವೇಳೆ ರಾಜಕಾರಣ ನಡೆದರೆ ಅದನ್ನು ಭೇದಿಸುವ ಶಕ್ತಿ ನನ್ನಲ್ಲಿದೆ ಎಂದು ಎಚ್ಚರಿಸಿದರು.
ನಾನು ಅಷ್ಟು ಅಶಕ್ತನಲ್ಲ. ಗಂಡಸ್ತತನ ತೋರಿಸೋದರ ಜೊತೆಗೆ, ಗದಗ ತಾಲೂಕಿನವರು ಬರಪೀಡಿತ ಅಂತ ಹೇಳಿ ಮಾಡಿಸಿಕೊಳ್ಳಲು ಅರ್ಹರಲ್ಲ ಎಂದು ಯಾರಾದರೂ ನಮಗೆ ಟೋಪಿ ಹಾಕಲು ಯತ್ನಿಸಿದರೆ ನಾನು ಸುಮ್ಮನಿರಲ್ಲ. ಅಕ್ಟೋಬರ್ 10ರೊಳಗೆ ಕೆಲಸವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಲು ಸಿದ್ಧ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಶಫಾಲಿ ವರ್ಮಾ 100 ರನ್, ಬಾಂಗ್ಲಾ 81 ರನ್‌ಗಳಿಗೆ ಆಲೌಟ್ – ಫೈನಲಿಗೆ ಭಾರತ


