ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಭಾಗವಾಗಿ ಹೊರಡಿಸಲಾಗಿರುವ ನೋಟಿಸ್ ಪಟ್ಟಿಯಲ್ಲಿ ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಎಲ್.ಕೆ. ಅಡ್ವಾಣಿ, (LK Advani) ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚುನಾವಣಾ ಆಯುಕ್ತ ಎಸ್.ಎಸ್ ಸಂಧು ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಕಾಣಿಸಿಕೊಂಡಿವೆ.
SIR ನೋಟಿಸ್ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ (Kapil Sibal), ಕಾಂಗ್ರೆಸ್‌ನ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಹೆಸರುಗಳೂ ಇವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೆಹಲಿ ಹಾಲಿ, ಮಾಜಿ ಸಿಎಂಗಳಿಗೆ SIR ನೋಟಿಸ್

ನೋಟಿಸ್ ಪಟ್ಟಿಯಲ್ಲಿ, ಚುನಾವಣಾ ದಾಖಲೆಗಳಲ್ಲಿ ಎಸ್.ಎಸ್ ಸಂಧು ಅವರ ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆ ಅವರಿಗೆ ನೋಟಿಸ್ ನೀಡಲಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಅವರ ಪತ್ನಿ ಕೆ.ಎಸ್. ಜೈಶಂಕರ್ (S Jaishankar) ಅವರ ಹೆಸರೂ ಮತದಾರರ ಪಟ್ಟಿಯ ಪರಿಶೀಲನಾ ಪ್ರಕ್ರಿಯೆಯಲ್ಲಿ ನೀಡಲಾಗಿರುವ ನೋಟಿಸ್‌ಗಳ ಪಟ್ಟಿಯಲ್ಲಿ ಪ್ರಕಟಗೊಂಡಿವೆ.
ಕಪಿಲ್ ಸಿಬಲ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಹೆಸರುಗಳನ್ನ ಹಿಂದಿನ SIR ದಾಖಲೆಗಳೊಂದಿಗೆ ಮ್ಯಾಪ್ ಮಾಡಲು ಸಾಧ್ಯವಾಗದ ಹಿನ್ನೆಲೆ ಅವರಿಗೆ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಕುಟುಂಬದ ಸದಸ್ಯರ ಹೆಸರುಗಳೂ ನೋಟಿಸ್ ಪಟ್ಟಿಯಲ್ಲಿವೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಅವರ ಹೆಸರೂ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಹಿಂದಿನ SIR ದಾಖಲೆಗಳೊಂದಿಗೆ ಹೆಸರುಗಳನ್ನ ಮ್ಯಾಪ್ ಮಾಡಲು ಸಾಧ್ಯವಾಗದಿರುವುದು ಅಥವಾ ದಾಖಲೆಗಳಲ್ಲಿ ಕಂಡುಬಂದಿರುವ ತಾರ್ಕಿಕ ವ್ಯತ್ಯಾಸಗಳು ಇದಕ್ಕೆ ಕಾರಣಗಳಾಗಿವೆ.

