ರಾಮನಗರ: ದಕ್ಷಿಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ ದೈಹಿಕ ಶಿಕ್ಷಕ ಕಚೇರಿಯ 3ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ವಿಜಯನಗರ ಮೂಲದ ಶಶಿಧರ್ (49) ಮೃತ ದೈಹಿಕ ಶಿಕ್ಷಕ. ಶಶಿಧರ್ ಕಳೆದ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶಶಿಧರ್ ವಿರುದ್ಧ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಶನಿವಾರ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಶುಕ್ರವಾರವೇ ಪೊಲೀಸರು ಇವರನ್ನು ಬಂಧಿಸಿದ್ದರು.
ರಾಮನಗರ ಮಹಿಳಾ ಠಾಣೆಯ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದರು. ಇಂದು ಮುಂಜಾನೆ ಆರೋಪಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ, ಮುಂದಿನ ಕಾನೂನು ಪ್ರಕ್ರಿಯೆಯಾಗಿ ಬೆರಳಚ್ಚು (ಫಿಂಗರ್ ಪ್ರಿಂಟ್) ನೋಂದಣಿ ಮಾಡಿಸಲು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು.
3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಎಸ್‌ಪಿ ಕಚೇರಿಯ ಮೂರನೇ ಮಹಡಿಯಲ್ಲಿ ಪೊಲೀಸರು ಶಶಿಧರ್ ಅವರ ಬೆರಳಚ್ಚು ಪಡೆಯಲು ಸಿದ್ಧತೆ ನಡೆಸುತ್ತಿದ್ದಾಗ, ತಕ್ಷಣವೇ ಶಶಿಧರ್ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿಮಧ್ಯದಲ್ಲೇ ಶಶಿಧರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉಡುಪಿ | ನದಿಗೆ ಬಿದ್ದ ಕಾರು ಚಾಲಕ, 3 ವರ್ಷದ ಮಗುವಿನ ಜೀವ ಉಳಿಸಿದ ಮೀನುಗಾರ
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಧಾವಿಸಿದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಪೊಲೀಸರ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಮುಖ್ಯೋಪಾಧ್ಯಾಯರ ವಿರುದ್ಧ ಆರೋಪ
ಶಿಕ್ಷಕ ಶಶಿಧರ್ ಅವರ ಆತ್ಮಹತ್ಯೆಗೆ ಪೊಲೀಸರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರೇ ನೇರ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿ ತೀವ್ರವಾಗಿ ಮಾನಸಿಕ ಒತ್ತಡ ಹೇರಿದ್ದರಿಂದಲೇ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜಯನಗರ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಆಟಾಟೋಪ ಮೆರೆದಿದ್ದ ಪುಡಿರೌಡಿಗಳ ಬಂಧನ

