– ನಕ್ಸಲ್ ಬಗ್ಗೆ ಮಾಹಿತಿ ನೀಡಿದವರಿಗೆ 30 ಲಕ್ಷ ರೂ. ಬಹುಮಾನ ಘೋಷಿಸಿದ್ದ ಸರ್ಕಾರ
ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭದ್ರತಾ ಸಂಸ್ಥೆಗಳಿಗೆ ದೀರ್ಘಕಾಲದಿಂದ ಬೇಕಾಗಿದ್ದ ನಿಷೇಧಿತ ನಕ್ಸಲ್ ಸಂಘಟನೆಯ ಕಮಾಂಡರ್ ಬ್ರಿಜೇಶ್ ಗಂಜು ಅಲಿಯಾಸ್ ಗೋಪಾಲ್ ಸಿಂಗ್ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (UP ATS) ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆಗೀಡಾಗಿದ್ದಾನೆ.
ಕೊಲ್ಲಲ್ಪಟ್ಟ ಗೋಪಾಲ್ ಸಿಂಗ್, ಜಾರ್ಖಂಡ್ ಮೂಲದ ನಿಷೇಧಿತ ನಕ್ಸಲ್ ಸಂಘಟನೆಯಾದ ತೃತೀಯಾ ಪ್ರಸ್ತುತಿ ಸಮಿತಿ (ಟಿಪಿಸಿ)ಯ ಪ್ರಮುಖ ಕಮಾಂಡರ್ ಆಗಿದ್ದನು. ಈತ ಹಲವಾರು ವರ್ಷಗಳಿಂದ ಭದ್ರತಾ ಸಂಸ್ಥೆಗಳ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿರುವ ತಾಂಡ್ವಾ ಭಯೋತ್ಪಾದನೆಗೆ ಹಣಕಾಸು ನೆರವು (ಟೆರರ್ ಫಂಡಿಂಗ್) ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ. ಇದನ್ನೂ ಓದಿ: ಜಯನಗರ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಆಟಾಟೋಪ ಮೆರೆದಿದ್ದ ಪುಡಿರೌಡಿಗಳ ಬಂಧನ
30 ಲಕ್ಷ ರೂ. ಬಹುಮಾನ
ನಕ್ಸಲ್ ಕಮಾಂಡರ್ ಬ್ರಿಜೇಶ್ ಗಂಜುವಿನ ಮಾಹಿತಿ ನೀಡಿದವರಿಗೆ 30 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಇದರಲ್ಲಿ ಜಾರ್ಖಂಡ್ ಸರ್ಕಾರವು 25 ಲಕ್ಷ ರೂ. ಮತ್ತು NIA ಹೆಚ್ಚುವರಿಯಾಗಿ 5 ಲಕ್ಷ ರೂ. ಬಹುಮಾನವನ್ನು ನಿಗದಿಪಡಿಸಿದ್ದವು.
ವಾರಣಾಸಿಯಲ್ಲಿ ಮುಂಜಾನೆ ನಡೆದ ಎನ್ಕೌಂಟರ್
ಸಿಬ್ಬಂದಿಗೆ ವಾರಣಾಸಿಯ ನಿರ್ದಿಷ್ಟ ಪ್ರದೇಶದಲ್ಲಿ ನಕ್ಸಲ್ ಕಮಾಂಡರ್ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಯುಪಿ ಎಟಿಎಸ್ ಮತ್ತು ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆ ಕೈಗೊಂಡು ಆರೋಪಿಯ ಎನ್ಕೌಂಟರ್ ಮಾಡಲಾಗಿದೆ.ಇದನ್ನೂ ಓದಿ: ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಬ್ಲಾಸ್ಟ್ – ಇಬ್ಬರು ಸಾವು, ಮಹಿಳೆ ಗಂಭೀರ

