– ಗಣೇಶೋತ್ಸವ ಹೇಗೆ ಆಚರಿಸಬೇಕು ಅನ್ನೋದನ್ನ ಬಿಜೆಪಿಯಿಂದ ಕಲಿಯಬೇಕಿಲ್ಲ ಎಂದ ಸಚಿವ
ಮೈಸೂರು: ಬಿಜೆಪಿಯವರು ರಣಹದ್ದುಗಳಿದ್ದಂತೆ, ಎಲ್ಲಿ ಕೋಮುಗಲಭೆ ಮಾಡೋದಕ್ಕೆ ಅವಕಾಶ ಸಿಗುತ್ತೆ ಅಂತ ಕಾಯ್ತಾ ಇರ್ತಾರೆ. ಇಡೀ ದೇಶದಲ್ಲಿ ಎಲ್ಲೆಲ್ಲಿ ಕೋಮುಗಲಭೆ ಆಗುತ್ತೆ, ಅಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ನೋಡ್ತಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವಾಗ್ದಾಳಿ ನಡೆಸಿದ್ದಾರೆ.
ಟಿ.ನರಸೀಪುರದಲ್ಲಿ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿಗೆ ಸವಾಲಾಗಿ ನಡೆಯುತ್ತಿದ್ದ ಶೋಭಾಯಾತ್ರೆ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದರ ಕುರಿತು ನಂಜನಗೂಡು ಬಿಳಿಗೆರೆ ಗ್ರಾಮದಲ್ಲಿ ಮಾತನಾಡಿದ್ದಾರೆ.
ಬಿಜೆಪಿಯವರು ರಣಹದ್ದುಗಳಿದ್ದಂತೆ, ಕೋಮುಗಲಭೆ (Communal Riots) ಮಾಡೋದಕ್ಕೆ ಅವಕಾಶ ಸಿಗುತ್ತೆ ಅಂತಾ ಕಾಯ್ತಾ ಇರ್ತಾರೆ. ರಾಜಕೀಯ ಅಸ್ತಿತ್ವ ಕಳೆದುಕೊಂಡವರು ಟಿ. ನರಸೀಪುರ ಪ್ರಕರಣ ಬಳಸಿಕೊಳ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ದೇಶದಲ್ಲಿ ನಡೆಯೋ ಕೋಮು ಗಲಭೆಗಳಿಗೆ ಬಿಜೆಪಿಯವರೇ ಕಾರಣ. ರಾಜಕೀಯವಾಗಿ ಮುನ್ನೆಲೆಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಎಲ್ಲ ಧರ್ಮದವರನ್ನ ಸರ್ಕಾರ ಒಂದೇ ರೀತಿಯಲ್ಲಿ ನೋಡುತ್ತದೆ. ದೇವಸ್ಥಾನಗಳ ಮುಂದೆ ಪಟಾಕಿ ಸಿಡಿಸಲು ಅವಕಾಶ ನೀಡುವಂತೆ ಚರ್ಚ್ ಮಸೀದಿಗಳ ಮುಂದೆಯೂ ನಿಯಮಾನುಸಾರ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷ ಟಿ.ನರಸೀಪುರದಲ್ಲಿ ಅನುಮತಿ ಪಡೆದಿರಲಿಲ್ಲ. ಅದೇ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಇನ್ಸ್ಪೆಕ್ಟರ್ ನಿಯಮಗಳ ಕುರಿತು ಸೂಚನೆ ನೀಡಿದ್ದಾರೆ. ಅದನ್ನ ದೊಡ್ಡ ಅನಾಹುತದ ರೀತಿ ಬಿಂಬಿಸುತ್ತಿದ್ದಾರೆ ಎಂದು ತಿವಿದರು.
ಗಣೇಶೋತ್ಸವ ಆರಂಭಿಸಿದವರು ಲೋಕಮಾನ್ಯ ತಿಲಕರು. ಅವರು ಯಾವ ಪಕ್ಷದಲ್ಲಿದ್ದರು? ಗಣೇಶೋತ್ಸವ ಆಚರಣೆ ಹೇಗೆ ಮಾಡಬೇಕು ಎಂಬುದನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ. ಸಂವಿಧಾನ ಕಾನೂನಿನ ಬಗ್ಗೆ ಬಿಜೆಪಿಯವರು ನಮಗೆ ಪಾಠ ಹೇಳುವ ಅಗತ್ಯವಿಲ್ಲ. ಪೊಲೀಸ್ ಇನ್ಸ್ಪೆಕ್ಟರ್ಗೆ ಧಮ್ಕಿ ನೀಡುವ ರೀತಿಯ ವರ್ತನೆ ಸರಿಯಲ್ಲ. ಇಂತಹ ಬೆಳವಣಿಗೆಗಳಿಂದಲೇ ಅವರ ಉದ್ದೇಶ ಏನೆಂಬುದು ತಿಳಿಯುತ್ತದೆ ಎಂದು ಕುಟುಕಿದ್ದಾರೆ.
ಮುಂದುವರಿದು.. ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರೆ ಕಾನೂನು ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.

