ಚೆನ್ನೈ: 5 ವರ್ಷಗಳಲ್ಲಿ ಮೂರು ಬಾರಿ ನೀಟ್ ಪ್ರಶ್ನೆ ಪತ್ರಿಕೆ (NEET Paper Leak) ಸೋರಿಕೆಯಾಗಿದೆ. ಆದರೆ, ಅದಕ್ಕೆ ಯಾರೂ ಹೊಣೆಗಾರರಾಗಿಲ್ಲ ಎಂದು ಕೇಂದ್ರ ಸರ್ಕಾರವನ್ನು ಬಿಜೆಪಿ ಮಾಜಿ ನಾಯಕ ಕೆ.ಅಣ್ಣಾಮಲೈ (K.Annamalai) ಪ್ರಶ್ನಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ಪ್ರತಿಭಟನಾಕಾರರೊಂದಿಗೆ ಮಾತನಾಡಲು ಕೇಂದ್ರ ಸರ್ಕಾರ ಏಕಿಷ್ಟು ತಡ ಮಾಡಿದೆ ಕೇಳಿದ್ದಾರೆ. ಇದನ್ನೂ ಓದಿ: `ಕಾಕ್ರೋಚ್ʼಗಳ ಮೇಲೆ ಹಿಂಸಾಚಾರ ಆರೋಪ – ಕೇಂದ್ರ ಸರ್ಕಾರ, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಕಳೆದ ಹಲವು ವರ್ಷಗಳಿಂದ ನೀಟ್ ಪರೀಕ್ಷೆಯನ್ನು ಬೆಂಬಲಿಸುವ ವೈಯಕ್ತಿಕ ನಿಲುವನ್ನು ನಾನು ತೆಗೆದುಕೊಂಡಿದ್ದೇನೆ. ಇದು ದೇಶಾದ್ಯಂತ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಏಕರೂಪತೆಯನ್ನು ತಂದಿದೆ. ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಲು ನಿಜವಾದ ಅವಕಾಶವನ್ನು ನೀಡಿದೆ ಎಂದು ವಾದಿಸುತ್ತಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಮೂರು ಬಾರಿ ಸೋರಿಕೆಯಾಗಿದೆ. ಏಕರೂಪತೆಯನ್ನು ತರಬೇಕಾದ ವ್ಯವಸ್ಥೆಯು ವಿಫಲವಾದಾಗ, ಮತ್ತೊಮ್ಮೆ ಪರೀಕ್ಷಾ ಪ್ರಕ್ರಿಯೆಯ ಮೂಲಕ ಹೋಗಬೇಕಾದ ವಿದ್ಯಾರ್ಥಿಗಳ ಮೇಲೆ ಅದು ಹೇರುವ ಒತ್ತಡವನ್ನು ಊಹಿಸಿ. ಆದರೂ ಯಾವುದೇ ಹೊಣೆಗಾರಿಕೆ ಇರಲಿಲ್ಲ. ಆ ಕ್ಷಣವೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದಲಾವಣೆಯನ್ನು ತಂದು ಬೀದಿಗಿಳಿದು ಹೋರಾಟ ಮಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪ್ರಶ್ನೆಯೆಂದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಇಷ್ಟು ಸಮಯ ತೆಗೆದುಕೊಂಡದ್ದು ಏಕೆ? ಪ್ರತಿಭಟನೆಯು ತೀವ್ರ ಹಂತಕ್ಕೆ ತಲುಪುವವರೆಗೆ ಅರ್ಥಪೂರ್ಣ ಮಾತುಕತೆ ಏಕೆ ವಿಳಂಬವಾಯಿತು? ನಿಮ್ಮನ್ನು ಕಾಯುವಂತೆ ಮಾಡಿದ್ದು ಏನು ಎಂದು ಕೇಂದ್ರವನ್ನು ಅಣ್ಣಾಮಲೈ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾ ವಂಚನೆ, 152 ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ ಬಾಂಬ್
ಯಾವುದೇ ರಾಷ್ಟ್ರದ ಶಕ್ತಿ ಅಲ್ಲಿನ ಯುವಜನರು ತಮ್ಮ ಸಂಸ್ಥೆಗಳ ಮೇಲೆ ಇಡುವ ವಿಶ್ವಾಸದಲ್ಲಿದೆ. ನಮ್ಮ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ವ್ಯವಸ್ಥೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆ ಕಳೆದುಕೊಂಡರೆ, ನಾವು ನಮ್ಮ ರಾಷ್ಟ್ರದ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದಂತೆ ಎಂದು ಎಚ್ಚರಿಸಿದ್ದಾರೆ.
