ಬಳ್ಳಾರಿ: ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವುದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಳ್ಳಾರಿಯ ಕುರುಗೋಡು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುರುಗೋಡು ಪಟ್ಟಣದ ದೊಡ್ಡ ಬಸವೇಶ್ವರ ದೇವಸ್ಥಾನದಿಂದ ಮೇನ್ ಸರ್ಕಲ್‌ವರೆಗೆ ಪಂಜಿನ ಮೆರವಣಿಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರ ಹಾಗೂ ಇಡಿ ಸಂಸ್ಥೆಯ ವಿರುದ್ಧ ಘೋಷಣೆಗಳನ್ನ ಕೂಗಿ ಪ್ರತಿಭಟನೆ ನಡೆಸಿದರು.

ರಾಜಕೀಯ ಉದ್ದೇಶಕ್ಕಾಗಿ ತನಿಖಾ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಇಡಿ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

