ಬೆಂಗಳೂರು: ಮುಖ್ಯಮಂತ್ರಿ ಅವರ ʻನಮ್ಮ ಮನೆʼ ಯೋಜನೆಯಡಿ ರಾಜ್ಯದಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನ (30 ಅಡಿ × 40 ಅಡಿ) ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಡಿಸಿಎಂ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ EWS, LIG, MIG ಮತ್ತು HIG ನಿವೇಶನಗಳನ್ನ ಒಳಗೊಂಡಂತೆ, ರಾಜ್ಯದಾದ್ಯಂತ ಜಮೀನಿನ ಲಭ್ಯತೆಗೆ ಅನುಗುಣವಾಗಿ 6,600 ಎಕರೆ ಜಮೀನಿನಲ್ಲಿ ಒಟ್ಟು 93,240 ನಿವೇಶನಗಳನ್ನ ಅಂದಾಜು 11,655 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
– ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ನಿಟ್ಟಿನಲ್ಲಿ “ಮುಖ್ಯಮಂತ್ರಿ ಕೃಷಿ ವಿಸ್ತಾರ” ಯೋಜನೆಯನ್ನು ಮುಂದಿನ ವರ್ಷಗಳಲ್ಲಿ ₹75 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನ
– ಆಯವ್ಯಯದಲ್ಲಿ ಘೋಷಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 7 ನಿಗಮಗಳು 2012-14ನೇ ಸಾಲಿನಿಂದ 2020-21ನೇ ಸಾಲಿನಿಂದ ವಿವಿಧ ಯೋಜನೆಗಳಡಿ ನೀಡಿದ ಸಾಲದ ಅಸಲನ್ನು ಪೂರ್ಣ ಮರುಪಾವತಿ ಮಾಡುವ ಫಲಾನುಭವಿಗಳಿಗೆ ಸಾಲಿನ ಮೇಲಿನ ಬಡ್ಡಿ ಮೊತ್ತ ಒಟ್ಟು ₹236.04 ಕೋಟಿಗಳನ್ನು ಮನ್ನಾ ಮಾಡುವ ಒಂದಾವರ್ತಿ ತೀರುವಳಿ ಯೋಜನೆಯನ್ನು ಜಾರಿಗೆ ತರಲು ತೀರ್ಮಾನ
– 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕರ್ನಾಟಕದಲ್ಲಿ ಸುಟ್ಟುಗಾಯಗಳಿಂದ ಬದುಕುಳಿದವರ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಾಮಾಜಿಕ ಪುನರ್ ಸಂಘಟನೆಯ ನೀತಿ 2025 ಜಾರಿಗೊಳಿಸಲು ತೀರ್ಮಾನ
– 2026-27 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ಹಾಗೂ ನಷ್ಟವನ್ನು ತಡೆಗಟ್ಟಲು 52-54 ಮೀಟರ್ ಎತ್ತರಕ್ಕೆ ತಲುಪಬಲ್ಲ ಒಂದು ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನವನ್ನು ₹16 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
– ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಯ ಯೋಜನಾ ವೆಚ್ಚವನ್ನು ₹193.65 ಕೋಟಿಗಳಿಂದ ₹542.96 ಕೋಟಿಗಳಿಗೆ ಪರಿಷ್ಕರಿಸಿ ಹೆಚ್ಚುವರಿ ₹349.31 ಕೋಟಿ ಅನುದಾನದ ಅಗತ್ಯ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೆ ಅನುಮೋದನೆ
– 2026-27ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 5,000 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ಅನ್ನು ₹25 ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಿ ವಿತರಿಸಲು ತೀರ್ಮಾನ
– ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಲ್ಲಿ ಪ್ರಜಾಸೌಧ, ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡದ ಎರಡನೇ ಹಂತದ ಕಾಮಗಾರಿಗೆ ₹5 ಕೋಟಿಗಳ ಅಂದಾಜು ವೆಚ್ಚಕ್ಕೆ ಅನುಮೋದನೆ ; ಮೊದಲ ಹಂತದಲ್ಲಿ ₹10 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
– ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ ; ಮುಂಬರುವ ವಿಧಾನ ಮಂಡಲದಲ್ಲಿ ಮಂಡಿಸಲು ತೀರ್ಮಾನ
– ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ ಮತ್ತು ಶಾಸಕಾಂಗದ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಲು ತೀರ್ಮಾನ
– 2026-27ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ₹27.97 ಕೋಟಿ ಅನುದಾನ ಮಂಜೂರು ಮಾಡಲು ತೀರ್ಮಾನ ; ಒಟ್ಟು 1.39 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನುಕೂಲ
– ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ಕ್ಕೆ ಎರಡನೇ ತಿದ್ದುಪಡಿ ವಿಧೇಯಕ 2026ಕ್ಕೆ ಅನುಮೋದನೆ
– ಬೆಂಗಳೂರಿನ ಯಶವಂತಪುರದಿಂದ ಹಳೆ ಮದ್ರಾಸ್ ರಸ್ತೆ ಮತ್ತು ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆವರೆಗೆ ʼಸಿʼ ವರ್ಗದ ಅಡಿಯಲ್ಲಿ ಬರುವ ಎರಡು ಎಲೆವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ನಿಧಿ ರಚನೆಯ ಸಂಬಂಧ ಆದೇಶ ಮಾರ್ಪಾಡು ಮಾಡಲು ತೀರ್ಮಾನ
– 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 71ರಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಪ್ರಾರಂಭಿಸಲು ಅನುಮೋದನೆ
– ಆಯವ್ಯಯ ಘೋಷಣೆಯಂತೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಸಂಸ್ಥೆಯಿಂದ ಹೊಸ ವೈಟ್ ಟಾಪಿಂಗ್ ಕಾಮಗಾರಿ 2026-27 ಯೋಜನೆಯ ಮೊದಲ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
– ಬಿ-ಸ್ಮೈಲ್ ವತಿಯಿಂದ ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರವರ್ತುಲ ರಸ್ತೆಯನ್ನು ಜಾಗತಿಕ ರೂಪದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆಯ ₹486.79 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ
– ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ, ಪ್ರಾಥಮಿಕ ಸಾಗಾಣಿಕೆ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಈಗಾಗಲೇ ಅನುಮೋದನೆಯಾಗಿರುವ 10 ಪ್ಯಾಕೇಜ್ಗಳ ₹1,379.62 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
– ನೊಣವಿನಕೆರೆಯನ್ನು ಮೂಲವಾಗಿಟ್ಟುಕೊಂಡು ತಿಪಟೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೆಚ್ಚುವರಿ ಯೋಜನೆಯ ₹39.35 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
– ಕೇಂದ್ರ ಪುರಸ್ಕೃತ ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಯಡಿ ಪೊಲೀಸ್ ಇಲಾಖೆಗೆ ಅಗತ್ಯವಿರುವ 134 Emergency Response Support System ವಾಹನಗಳನ್ನು ಒಟ್ಟು ₹11 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ
– ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರದ ಕೆಂಗೇರಿ ಬಳಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂಕೀರ್ಣ / ಮಲ್ಟಿಫ್ಲೆಕ್ಸ್ ಕಟ್ಟಡದ ಎರಡನೇ ಹಂತದ ಕಾಮಗಾರಿಗಳನ್ನು ₹68.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ
– ಆಯವ್ಯಯ ಘೋಷಣೆಯಂತೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧಾರಿತವಾಗಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣದ ಗುರಿಯನ್ನು ಜಾರಿಗೊಳಿಸಲು ತೀರ್ಮಾನ ; ಈ ಗುರಿಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳ ಸಹಾಯಧನ ₹1.20 ಲಕ್ಷಗಳಿಂದ ₹2 ಲಕ್ಷಗಳಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹2 ಲಕ್ಷಗಳಿಂದ ₹3 ಲಕ್ಷಗಳಿಗೆ ಹೆಚ್ಚಿಸಲು ತೀರ್ಮಾನ
– ಮುಖ್ಯಮಂತ್ರಿಯವರ “ನಮ್ಮ ಮನೆ” ಯೋಜನೆಯಡಿ ರಾಜ್ಯಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನು (30 ಅಡಿ X 40 ಅಡಿ ಅಳತೆ) ಒದಗಿಸಲು ತೀರ್ಮಾನ
– ಕೆಶಿಪ್ – IV ಯೋಜನೆಯಡಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ನೆರವಿನೊಂದಿಗೆ ₹10,252.58 ಕೋಟಿಗಳ ಅಂದಾಜು ವೆಚ್ಚದಲ್ಲಿ 9 ರಸ್ತೆಗಳ ಒಟ್ಟಾರೆ 730.01 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ
– ವಿಶ್ವಬ್ಯಾಂಕಿನ ಸಹಯೋಗದೊಂದಿಗೆ ₹1,700 ಕೋಟಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಬಸ್ ಕಾರ್ಯಕ್ರಮ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹುಬ್ಬಳ್ಳಿಯ ಹೃದ್ರೋಗ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳನ್ನು ಖರೀದಿಸಲು ₹36.597 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
– ಭಾರತ್ ಜೋಡೋ ಯುವಸಂಘ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಯುವ ಸಮಿತಿ ರಚಿಸಲು ಹಾಗೂ ಪೂರ್ಣಾವಧಿ ಸಂಯೋಜಕರು ಮತ್ತು ಪ್ರೇರಕರನ್ನು ನೇಮಿಸಲು ಅನುಮೋದನೆ
— Dr. G Parameshwara (@DrParameshwara) November 19, 2026
ಇದರಲ್ಲಿ ಸಮುದಾಯದ ಶ್ರಮಿಕರಿಗೆ (Community Workers) ಹಾಗೂ EWS ಫಲಾನುಭವಿಗಳಿಗೆ ಶೇ. 50ರ ರಿಯಾಯಿತಿ ದರದಲ್ಲಿ ಅಂದಾಜು 2,914 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಇದಲ್ಲದೇ, ರಾಜೀವ್ ಗಾಂಧಿ ವಸತಿ ನಿಗಮದಡಿ 1 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕಾಗಿ 2,241 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಜಿಬಿಎ ವ್ಯಾಪ್ತಿಯ ಕೆಂಗೇರಿ ಕೊಳಗೇರಿಯಲ್ಲಿ 1.20 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣಕ್ಕೆ 68 ಕೋಟಿ ರೂ. ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಬಿ-ಸ್ಮೈಲ್ ಯೋಜನೆಯಡಿ 130 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, 12 ಪ್ಯಾಕೇಜ್ಗಳಲ್ಲಿ ಕಾಮಗಾರಿ ಕೈಗೊಳ್ಳಲು 2,321 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದ್ದರೆ.
ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರಂವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ 1,379 ಕೋಟಿ ರೂ. ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ. ಲೋಕಾಯುಕ್ತದಲ್ಲಿ ಅವಧಿ ಮುಗಿದ 20 ಸಹಾಯಕ ಅಭಿಯೋಜಕರನ್ನು ಮುಂದುವರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.
