ಶಿವಮೊಗ್ಗ: ಗಿಡಮೂಲಿಕೆ ಹಾಗೂ ತೈಲದ ವ್ಯಾಪಾರಕ್ಕೆ ಪ್ರವಾಸಿ ವೀಸಾದಲ್ಲಿ ತೆರಳಿದ್ದ ರಾಜ್ಯದ ಹಕ್ಕಿಪಿಕ್ಕಿ ಸಮುದಾಯದ (Hakki Pikki Tribals) 95 ಮಂದಿಯನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಂಧಿಸಲಾಗಿದೆ. ಬಂಧಿತರ ಪೈಕಿ ಶಿವಮೊಗ್ಗ (Shivamogga) ಜಿಲ್ಲೆಯ ಹಕ್ಕಿಪಿಕ್ಕಿ ಕ್ಯಾಂಪ್ನ 70 ಮಂದಿ ಹಾಗೂ ದಾವಣಗೆರೆಯ (Davanagere) ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಗ್ರಾಮದ 25 ಮಂದಿ ಸೇರಿದ್ದಾರೆ.
ಕಾಂಗೋದ ಬೆನಿ ಮತ್ತು ಕಿಸಂಗಾನಿ ನಗರದಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದವರನ್ನು ಅಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಅವರನ್ನು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಕರೆತರಲಾಗಿದ್ದು, ವಶದಲ್ಲಿ ಇರಿಸಲಾಗಿದೆ. ಬಂಧಿತರನ್ನ ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಗಳ ಮಾರಾಟ – ಚಿಕ್ಕಮಗಳೂರು ಹಕ್ಕಿಪಿಕ್ಕಿ ದಂಪತಿಯಿಂದ ನೀಚ ಕೃತ್ಯ
ಬಂಧಿತರ ಕುಟುಂಬಗಳಲ್ಲಿ ಆತಂಕ ಉಂಟಾಗಿದೆ. ಕಾಂಗೋದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ನಿಟ್ಟಿನಲ್ಲಿ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಮುದಾಯದ ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಆರ್. ಒತ್ತಾಯಿಸಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದವರನ್ನು ವಿದೇಶಕ್ಕೆ ಕಳುಹಿಸಿ ವ್ಯಾಪಾರ ಮಾಡಿಸುವುದಾಗಿ ನಂಬಿಸಿದ ಸ್ಥಳೀಯ ಏಜೆಂಟರು ಪ್ರತಿಯೊಬ್ಬರಿಂದ ಸುಮಾರು 5 ಲಕ್ಷ ರೂ. ಹಣ ಪಡೆದಿದ್ದಾರೆ. ಹಣ ಪಡೆದು ವಿದೇಶಕ್ಕೆ ಕಳುಹಿಸಿದ್ದ ಏಜೆಂಟರು ಈಗ ಪರಾರಿಯಾಗಿದ್ದಾರೆ. ಕಾಂಗೋದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ಬಂಧನಕ್ಕೊಳಗಾಗಲು ನಕಲಿ ದಾಖಲೆಗಳ ಬಳಕೆ ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ನಡೆಸಿರುವುದು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟವರು ಯಾರು? ವೀಸಾ ಪ್ರಕ್ರಿಯೆಯಲ್ಲಿ ಏಜೆಂಟರ ಪಾತ್ರವೇನು ಹಾಗೂ ಹಣ ಪಡೆದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗೋದ ವಿವಿಧ ನಗರಗಳಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 200ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. 95 ಮಂದಿ ಬಂಧನಕ್ಕೊಳಗಾಗಿರುವುದರಿಂದ ಅಲ್ಲಿರುವ ಇತರ ಹಕ್ಕಿಪಿಕ್ಕಿ ಸಮುದಾಯದವರಲ್ಲಿಯೂ ಭೀತಿ ಉಂಟಾಗಿದೆ. ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ ಭಾರತೀಯ ಹಕ್ಕಿಪಿಕ್ಕಿ ಸಮುದಾಯದವರನ್ನು ಗುರುತಿಸಿ, ಅವರ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಅಗತ್ಯವಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಫ್ರಿಕಾಕ್ಕೆ ಗಿಡಮೂಲಿಕೆ ಮಾರಾಟಕ್ಕೆ ತೆರಳಿದ್ದ ರಾಜ್ಯದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಲಾಕ್ – 1500 ಡಾಲರ್ ಬೇಡಿಕೆ!
