ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮತ್ತು ಇತರರು ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ವಿಚಾರಣೆ (Murder Case Trial) ಇದೀಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪ್ರಕರಣದ ತ್ವರಿತಗತಿ ವಿಚಾರಣೆಗೆ ಸಂಬಂಧಿಸಿದಂತೆ ಸಿಸಿಎಚ್ 59 ರ ಸೆಷನ್ಸ್ ನ್ಯಾಯಾಲಯವು ಮಹತ್ವದ ಆದೇಶ ನೀಡಿದ್ದು, ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ, ಪ್ರಕರಣವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ನ್ಯಾಯಾಲಯ ಉಭಯ ವಕೀಲರಿಗೆ ಖಡಕ್ ಸೂಚನೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು, ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದು ವರ್ಷದೊಳಗೆ ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಬೇಕಿದೆ. ಹೀಗಾಗಿ ಪ್ರತಿದಿನವೂ (Day-to-Day Basis) ವಿಚಾರಣೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಪ್ರಕ್ರಿಯೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ವಾರದಲ್ಲಿ ನಾಲ್ಕು ದಿನಗಳ ಕಾಲ ಕಡ್ಡಾಯವಾಗಿ ವಿಚಾರಣೆ ನಡೆಸಲು ಆದೇಶಿಸಿದರು. ಅಲ್ಲದೆ ಅಗತ್ಯ ಬಿದ್ದಲ್ಲಿ 5ನೇ ದಿನವೂ ವಿಚಾರಣೆಗೆ ಸಿದ್ಧರಿರಬೇಕು ಎಂದು ವಕೀಲರಿಗೆ ತಿಳಿಸಿದರು.

ಈ ವೇಳೆ ಕೋರ್ಟ್ ವಾರಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳ ಪಾಟೀ ಸವಾಲು (Cross Examination) ಮುಗಿಸಬೇಕು. ತಿಂಗಳಿಗೆ ಕನಿಷ್ಠ 8 ಸಾಕ್ಷಿಗಳ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿ ವಕೀಲರು ಪೂರ್ಣಗೊಳಿಸಬೇಕು ಎಂದು ಸೂಚಿಸಿತು.
ಇದೇ ವೇಳೆ ಸಾಕ್ಷಿಯೊಬ್ಬರ ಕ್ರಾಸ್ ಎಕ್ಸಾಮಿನೇಷನ್‌ಗೆ ದರ್ಶನ್ ಪರ ವಕೀಲ ಸುನೀಲ್ ಸಮಯ ಕೇಳಿದಾಗ, ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಕಾಲಹರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಕ್ಷಣದ ವಿಚಾರಣೆಗೆ ಒತ್ತಾಯಿಸಿದರು. ನ್ಯಾಯಾಧೀಶರು ಸಹ ತ್ವರಿತ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದಾಗ ದರ್ಶನ್ ಪರ ವಕೀಲರು ಒಪ್ಪಿಗೆ ನೀಡಿದರು. ಸುಪ್ರೀಂ ಕೋರ್ಟ್ ಗಡುವಿನ ಪ್ರಕಾರ ಪ್ರಾಸಿಕ್ಯೂಷನ್ ವಿಚಾರಣೆ ನಡೆಸಲು ಉದ್ದೇಶಿಸಿರುವ ಆ 60 ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ನಮಗೆ ನೀಡಬೇಕು ಎಂದು ದರ್ಶನ್ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.
ವಿಚಾರಣೆಯ ಸಂದರ್ಭದಲ್ಲಿ ನಟ ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಬದಲಾಗಿ ನೇರವಾಗಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ಅವರ ಪರ ವಕೀಲರು ವಿಶೇಷ ಅರ್ಜಿ ಸಲ್ಲಿಸಿದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಖುದ್ದು ಹಾಜರಾತಿಯ ಅಗತ್ಯವಿಲ್ಲ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗಲಿ ಎಂದು ವಾದಿಸಿದರು. ಈ ಅರ್ಜಿಗೆ ಸಂಬಂಧಿಸಿದಂತೆ ನಾಳೆ (ಮಂಗಳವಾರ) ಪ್ರಾಸಿಕ್ಯೂಷನ್ ಅಧಿಕೃತ ಆಕ್ಷೇಪಣೆ ಸಲ್ಲಿಸಲಿದ್ದಾರೆ.

