– ಜೂನ್ 19ಕ್ಕೆ ಐತಿಹಾಸಿಕ ಶಾಂತಿ ಒಪ್ಪಂದ
– ಜಾಗತಿಕ ತೈಲ ಮಾರುಕಟ್ಟೆ ನಿರಾಳ
ವಾಷಿಂಗ್ಟನ್/ಟೆಹರಾನ್: ಕಳೆದ 106 ದಿನಗಳಿಂದ ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿಟ್ಟಿದ್ದ ಇರಾನ್-ಅಮೆರಿಕ-ಇಸ್ರೇಲ್ (Iran-USA- Isreal) ನಡುವಿನ ಭೀಕರ ಸಂಘರ್ಷ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಇರಾನ್ ಜೊತೆಗಿನ ಬಹುನಿರೀಕ್ಷಿತ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ (Donald Trump) ಬರುವ ಜೂನ್ 19 ರಂದು ಸ್ವಿಟ್ಜರ್‌ಲೆಂಡ್‌ನ ಜಿನೆವಾದಲ್ಲಿ ಉಭಯ ದೇಶಗಳು 14 ಅಂಶಗಳ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಲಿವೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದವು ಹೊರ್ಮುಜ್ ಜಲಸಂಧಿಯನ್ನು(Strait of Hormuz) ಮತ್ತೆ ತೆರೆಯಲು ಮತ್ತು ಇರಾನ್ ಬಂದರುಗಳ ಮೇಲಿನ ಅಮೆರಿಕ ನೌಕಾ ದಿಗ್ಬಂಧನವನ್ನು ಕೊನೆಗೊಳಿಸಲು ನೆರವಾಗಲಿದೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಸ್ಟಾರ್ಟ್ ಮಾಡಿ, ತೈಲ ಹರಿಯಲು ಬಿಡಿ. ಎಲ್ಲರಿಗೂ ಅಭಿನಂದನೆಗಳು ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಒಪ್ಪಂದಕ್ಕೆ ಸಹಿ ಬಿದ್ದ ಬೆನ್ನಲ್ಲೇ ಜಾಗತಿಕ ತೈಲ ಸಂಚಾರಕ್ಕೆ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಬೆನ್ನಲ್ಲೇ ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಕೂಡ ಈ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.
ಮಹತ್ವದ ಶಾಂತಿ ಒಪ್ಪಂದದ ಫೈನಲ್ ಡೀಲ್ ಹಿಂದೆ ಗಲ್ಫ್ ರಾಷ್ಟ್ರ ಕತಾರ್‌ನ ಶ್ರಮ ದೊಡ್ಡದಿದೆ. ಇರಾನ್ ರಾಜಧಾನಿ ಟೆಹರಾನ್‌ನ್‌ನಲ್ಲಿ ಸತತ 17 ಗಂಟೆಗಳ ಕಾಲ ಸರಣಿ ಸಭೆಗಳನ್ನು ನಡೆಸಿ ಕತಾರ್ ಮುಖಂಡರು ಮಧ್ಯಸ್ಥಿಕೆ ವಹಿಸಿದ್ದರು. ಇದನ್ನೂ ಓದಿ: ಕತಾರ್ ಮಧ್ಯಸ್ಥಿಕೆ.. 17 ಗಂಟೆಗಳ ಸಭೆ; ಯುಎಸ್-ಇರಾನ್ ಶಾಂತಿ ಒಪ್ಪಂದ ಹೇಗಾಯ್ತು?
ಈ ಒಪ್ಪಂದದ ಅಜೆಂಡಾದಿಂದ ಇರಾನ್‌ನ ಮಿಸೈಲ್ ಯೋಜನೆಗಳನ್ನು ಮತ್ತು ಇತರೆ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುವ ಬೆಂಬಲದ ಕುರಿತಾದ ಚರ್ಚೆಗಳನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.
ಇಸ್ರೇಲ್ ವಿರೋಧ
ಇರಾನ್-ಅಮೆರಿಕ ನಡುವಿನ ಒಪ್ಪಂದಕ್ಕೆ ಮಿತ್ರರಾಷ್ಟ್ರ ಇಸ್ರೇಲ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಾವು ಈ ಒಪ್ಪಂದವನ್ನು ಒಪ್ಪುವುದಿಲ್ಲ. ಇದು ನಮ್ಮ ದೇಶದ ಭದ್ರತೆಯನ್ನು ಖಾತ್ರಿಪಡಿಸುತ್ತಿಲ್ಲ. ಲೆಬನಾನ್ ಮೇಲೆ ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್‌ನ ಇಬ್ಬರು ಪ್ರಮುಖ ಸಚಿವರು ಗುಡುಗಿದ್ದಾರೆ.
ಮಿಲಿಟರಿ ಮತ್ತು ಕದನ ವಿರಾಮಕ್ಕೆ ಸಂಬಂಧಿಸಿದ ಅಂಶಗಳು
1. ಶಾಶ್ವತ ಕದನ ವಿರಾಮ: ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಿಂಸಾಚಾರಕ್ಕೆ ತಕ್ಷಣವೇ ಶಾಶ್ವತ ಬ್ರೇಕ್ ಹಾಕುವುದು.
2. ಸೇನಾ ಬಲಪ್ರಯೋಗಕ್ಕೆ ಅಂತ್ಯ: ಉಭಯ ದೇಶಗಳು ಇನ್ನು ಮುಂದೆ ಪರಸ್ಪರ ಯುದ್ಧ ಘೋಷಿಸುವುದಿಲ್ಲ ಅಥವಾ ಸೇನಾ ಬಲವನ್ನು ಬಳಸುವುದಿಲ್ಲ ಎಂದು ಒಪ್ಪಿಕೊಳ್ಳುವುದು.
3. ಅಮೆರಿಕ ಸೇನೆ ಹಿಂಪಡೆಯುವಿಕೆ: ಇರಾನ್ ದೇಶದ ಸುತ್ತಮುತ್ತಲಿನ ಪ್ರದೇಶಗಳಿಂದ ಅಮೆರಿಕ ತನ್ನ ಮಿಲಿಟರಿ ಪಡೆಗಳನ್ನು ಹಿಂಪಡೆಯುವುದು.
4. ಹೆಚ್ಚುವರಿ ಸೇನೆ ನಿಯೋಜನೆ ಇಲ್ಲ: ಮಾತುಕತೆ ನಡೆಯುವ ಅವಧಿಯಲ್ಲಿ ಅಮೆರಿಕ ಮಧ್ಯಪ್ರಾಚ್ಯ ಪ್ರದೇಶಕ್ಕೆ ತನ್ನ ಯಾವುದೇ ಹೊಸ ಸೇನಾ ತುಕಡಿಗಳನ್ನು ಕಳುಹಿಸಬಾರದು.
5. ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪವಿಲ್ಲ: ಇರಾನ್ ದೇಶದ ಆಂತರಿಕ ರಾಜಕೀಯ ಮತ್ತು ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು. ಇದನ್ನೂ ಓದಿ: ಮತ್ತೊಂದು ‘ಪೆಟ್ರೋ ಡಾಲರ್’ ಒಪ್ಪಂದಕ್ಕೆ ಟ್ರಂಪ್ ಮಾಸ್ಟರ್ ಪ್ಲಾನ್- ಮಧ್ಯಪ್ರಾಚ್ಯದ 20% ಆದಾಯಕ್ಕೆ ಅಮೆರಿಕ ಬೇಡಿಕೆ!
ವಾಣಿಜ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅಂಶಗಳು
6. ಹೊರ್ಮುಜ್ ಜಲಸಂಧಿ ಮುಕ್ತ: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮುಂದಿನ 30 ದಿನಗಳ ಒಳಗೆ ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಇರಾನ್ ಮುಕ್ತಗೊಳಿಸಬೇಕು.
7. ನೌಕಾ ದಿಗ್ಬಂಧನ ತೆರವು: ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು 30 ದಿನಗಳ ಒಳಗೆ ಸಂಪೂರ್ಣವಾಗಿ ತೆಗೆದುಹಾಕಬೇಕು.
8. ತೈಲ ಮತ್ತು ಇಂಧನ ನಿರ್ಬಂಧಗಳ ರದ್ದು: ಇರಾನ್‌ನ ತೈಲ, ಪೆಟ್ರೋಕೆಮಿಕಲ್ ಮತ್ತು ಇಂಧನ ಉತ್ಪನ್ನಗಳ ಮಾರಾಟದ ಮೇಲಿರುವ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ರದ್ದುಗೊಳಿಸಬೇಕು.
9. ಹೊಸ ಆರ್ಥಿಕ ನಿರ್ಬಂಧ ಹೇರುವಂತಿಲ್ಲ: ಈ ಒಪ್ಪಂದದ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಅಮೆರಿಕವು ಇರಾನ್ ಮೇಲೆ ಯಾವುದೇ ಹೊಸ ಆರ್ಥಿಕ ನಿರ್ಬಂಧಗಳನ್ನು ವಿಧಿಸುವಂತಿಲ್ಲ.
10. ಪುನರ್ ನಿರ್ಮಾಣ ವೆಚ್ಚ: ಯುದ್ಧದಿಂದ ತೊಂದರೆಗೊಳಗಾದ ಇರಾನ್‌ನ ಆರ್ಥಿಕತೆ ಮತ್ತು ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಕನಿಷ್ಠ 300 ಶತಕೋಟಿ ಡಾಲರ್ ಯೋಜನೆ ರೂಪಿಸಬೇಕು.
ಪರಮಾಣು ಮತ್ತು ಹಣಕಾಸು ಬಿಡುಗಡೆಯ ಷರತ್ತುಗಳು
11.ಪರಮಾಣು ಅಸ್ತ್ರ ತಯಾರಿಸದಿರುವುದು: ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ (NPT) ತಾನು ಯಾವುದೇ ಪರಮಾಣು ಆಯುಧಗಳನ್ನು ತಯಾರಿಸುವುದಿಲ್ಲ ಎಂಬ ಜವಾಬ್ದಾರಿಗೆ ಇರಾನ್ ಬದ್ಧವಾಗಿರಬೇಕು.
12. 60 ದಿನಗಳ ಗಡುವು: ಪರಮಾಣು ವಿಷಯಗಳು, ಯುರೇನಿಯಂ ಪುಷ್ಠೀಕರಣ ಮತ್ತು ಅಮೆರಿಕದ ಪ್ರಾಥಮಿಕ ನಿರ್ಬಂಧಗಳ ಸಂಪೂರ್ಣ ತೆರವು ಕುರಿತು ಅಂತಿಮ ತೀರ್ಮಾನಕ್ಕೆ ಬರಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗುವುದು.
13. ಮುಟ್ಟುಗೋಲು ಹಾಕಿಕೊಂಡ ಹಣ ಬಿಡುಗಡೆ: ಅಮೆರಿಕ ತಡೆಹಿಡಿದಿರುವ ಇರಾನ್‌ಗೆ ಸೇರಿದ ಒಟ್ಟು 24 ಶತಕೋಟಿ ಡಾಲರ್ ಹಣವನ್ನು ಬಿಡುಗಡೆ ಮಾಡಬೇಕು.
14. ಒಪ್ಪಂದ ಜಾರಿಗೆ ಪ್ರಮುಖ ಷರತ್ತು: ಅಂತಿಮ ಮಾತುಕತೆಗಳು ಅಧಿಕೃತವಾಗಿ ಆರಂಭವಾಗಬೇಕಾದರೆ, ಇರಾನ್‌ನ ಒಟ್ಟು ಮುಟ್ಟುಗೋಲು ಹಣದಲ್ಲಿ ಅರ್ಧದಷ್ಟು (12 ಶತಕೋಟಿ ಡಾಲರ್) ತಕ್ಷಣ ಬಿಡುಗಡೆಯಾಗಬೇಕು, ತೈಲ ನಿರ್ಬಂಧಗಳನ್ನು ಅಮಾನತುಗೊಳಿಸಬೇಕು ಮತ್ತು ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಅಲ್ಲದೆ ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಒಪ್ಪಿಗೆಯ ಮುದ್ರೆ ಇರಬೇಕು.
