ವಾಷಿಂಗ್ಟನ್: ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಜಾಗತಿಕ ಮಟ್ಟದಲ್ಲಿ ‘ಸೂಪರ್ ಪವರ್’ ಆಗಿ ಹೊರಹೊಮ್ಮಲು ಕಾರಣವಾಗಿದ್ದು ಐತಿಹಾಸಿಕ ಪೆಟ್ರೋ ಡಾಲರ್(Petrodollar Agreement) ಒಪ್ಪಂದ. ಇದೀಗ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟ್ರಂಪ್ (Donald Trump) ನೇತೃತ್ವದ ಅಮೆರಿಕ ಸರ್ಕಾರ ಮತ್ತೊಮ್ಮೆ ಅಂತಹದ್ದೇ ಬೃಹತ್ ಒಪ್ಪಂದಕ್ಕೆ ಕೈಹಾಕುವ ಸ್ಪಷ್ಟ ಸುಳಿವು ನೀಡಿದೆ.
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಪರಮಾಣು ಒಪ್ಪಂದ ಮತ್ತು ಮಧ್ಯಪ್ರಾಚ್ಯದ ಭದ್ರತೆಗೆ ಸಂಬಂಧಿಸಿದಂತೆ ಜಾಗತಿಕ ರಾಜಕಾರಣವನ್ನೇ ಬೆಚ್ಚಿಬೀಳಿಸುವ ಹೊಸ ಷರತ್ತೊಂದನ್ನು ಮುನ್ನೆಲೆಗೆ ತಂದಿದ್ದಾರೆ.
ಒಂದು ವೇಳೆ ಇರಾನ್ (Iran) ಜೊತೆಗಿನ ಪರಮಾಣು ಮಾತುಕತೆಗಳು ವಿಫಲವಾದರೆ, ಅಮೆರಿಕವು ಇಡೀ ಮಧ್ಯಪ್ರಾಚ್ಯದ ರಕ್ಷಕನಾಗಿ (Guardian of the Middle East) ನಿಲ್ಲಲಿದೆ. ಆದರೆ, ಇದಕ್ಕೆ ಪ್ರತಿಯಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ತಮ್ಮ ಒಟ್ಟು ಆದಾಯದ 20% ರಷ್ಟನ್ನು (20% Revenue) ಅಮೆರಿಕಕ್ಕೆ ಪಾಲಾಗಿ ನೀಡಬೇಕು ಎಂದು ಟ್ರಂಪ್ ಷರತ್ತು ವಿಧಿಸಿದ್ದಾರೆ. ಈ ಭಾರಿ ಮೊತ್ತದ ಬೇಡಿಕೆಗೆ ಸೌದಿ ಅರೇಬಿಯಾ ಅಥವಾ ಯುಎಇ ನಂತಹ ಗಲ್ಫ್ ರಾಷ್ಟ್ರಗಳು ಒಪ್ಪಿವೆಯೇ ಎಂಬ ಪ್ರಶ್ನೆಗೆ, “ನಾವು ಈ ಕುರಿತು ಈಗಷ್ಟೇ ಚರ್ಚೆಗಳನ್ನು ಆರಂಭಿಸಿದ್ದೇವೆ” ಎಂದು ಟ್ರಂಪ್ ಉತ್ತರಿಸಿದ್ದಾರೆ.
ಇರಾನ್ ಅಮೆರಿಕದೊಂದಿಗೆ ಅಂತಿಮ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ತಕ್ಷಣವೇ ಆ ದೇಶದ ಮೇಲೆ ಮಿಲಿಟರಿ ದಾಳಿ ಪ್ರಾರಂಭಿಸುವುದಾಗಿ ಟ್ರಂಪ್ ಕಟು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಇರಾನ್ ಎಂದಿಗೂ ಯುದ್ಧಕ್ಕೆ ಬಳಸುವಂತಹ ಶಕ್ತಿಯುತ ಪರಮಾಣು ಅಸ್ತ್ರಗಳನ್ನು ತಯಾರಿಸದಂತೆ ಶಾಶ್ವತವಾಗಿ ತಡೆಯುವುದು ಅಮೆರಿಕದ ಗುರಿಯಾಗಿದೆ.

ಇಸ್ರೇಲ್ (Isreal) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರನ್ನು ಸಂಬಾಳಿಸುವುದು ಬಹಳ ಕಷ್ಟ. ಇರಾನ್ ಅಣ್ವಸ್ತ್ರ ತಯಾರಿಕೆ ಮುಂದುವರೆಸಿದ್ದರೆ ಇಸ್ರೇಲ್‌ನ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿ ಕೇವಲ ಎರಡೇ ಗಂಟೆಗಳಲ್ಲೇ ನಾಶವಾಗುತ್ತಿತ್ತು. ಹಾಗಾಗಿ ಅಣ್ವಸ್ತ್ರ ಒಪ್ಪಂದ ಮಾಡಿದ್ದಕ್ಕಾಗಿ ಇಸ್ರೇಲ್‌ನವರು ಅಮೆರಿಕಗೆ ಧನ್ಯವಾದ ಹೇಳಬೇಕು ಎಂದು ಟ್ರಂಪ್ ಹೇಳಿದರು.
ಇರಾನ್ 20 ವರ್ಷಗಳ ಕಾಲ ಯುರೇನಿಯಂ ತಯಾರಿಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ನಾವು 15 ವರ್ಷಗಳ ಅವಧಿಗೆ ಒಪ್ಪಿಕೊಳ್ಳಬಹುದು. ಇರಾನ್ ಎಂದಿಗೂ ಯುದ್ಧ ಅಥವಾ ಮಿಲಿಟರಿ ಕೆಲಸಗಳಿಗೆ ಬಳಸುವಷ್ಟು ಶಕ್ತಿಯುತವಾದ ಪರಮಾಣು ತಯಾರಿಸದಂತೆ ಶಾಶ್ವತವಾಗಿ ತಡೆಯಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದ; ಕಚ್ಚಾ ತೈಲ ಬೆಲೆ ಭಾರಿ ಇಳಿಕೆ
ಏನಿದು ಒಪ್ಪಂದ?
ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ಸೌದಿ ರಾಜಮನೆತನದ ಜೊತೆ 1971 ರಿಂದ ಸರಣಿ ಮಾತುಕತೆ ನಡೆದು ಜೂನ್ 8, 1974 ರಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪೆಟ್ರೋಡಾಲರ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ಸೌದಿ ಅರೇಬಿಯಾ ಸಹಿ ಹಾಕಿದ್ದು ಯಾಕೆ?
ಅಟೊಮೊಬೈಲ್ ಕ್ಷೇತ್ರ ತೆರೆದುಕೊಳ್ಳುತ್ತಿದ್ದಂತೆ ಅಮೆರಿಕ ಮತ್ತು ಬ್ರಿಟಿಷರು ತೈಲ ನಿಕ್ಷೇಪಗಳನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಭೂಮಿಯಿಂದ ತೈಲವನ್ನು ಕೊರೆಯುವ ತಂತ್ರಜ್ಞಾನ ಈ ದೇಶಗಳಿಗೆ ಮಾತ್ರ ತಿಳಿದಿತ್ತು. 1938ರಲ್ಲಿ ಅಮೆರಿಕದ ಕಂಪನಿ ಸೌದಿ ಅರೇಬಿಯಾದಲ್ಲಿ ತೈಲ ಕೊರೆಯಲು ಆರಂಭಿಸಿತ್ತು. ಸೌದಿ ಅರೇಬಿಯಾಗೆ ತಮ್ಮ ಬಳಿ ಇದ್ದ ಈ ಅಮೂಲ್ಯ ಸಂಪತ್ತು ಮುಂದೆ ವಿಶ್ವವನ್ನೇ ಆಳುತ್ತದೆ ಎಂಬ ಕಲ್ಪನೆ ಸಹ ಇರಲಿಲ್ಲ. ಈ ಸಂದರ್ಭದಲ್ಲಿ ಭೂಮಿಯಿಂದ ಕಚ್ಚಾ ತೈಲವನ್ನು ತೆಗೆದು ಸಂಸ್ಕರಿಸುವ ತಂತ್ರಜ್ಞಾನ ಅಮೆರಿಕ ಮತ್ತು ಬ್ರಿಟಿಷ್ ಕಂಪನಿಗಳಿಗೆ ಮಾತ್ರ ತಿಳಿದಿತ್ತು.
ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿ ಅಮೆರಿಕವನ್ನು ಗುರಿಯಾಗಿಸಿಕೊಂಡು ಸೌದಿ ಮೇಲೆ ದಾಳಿ ನಡೆಸಿತು. ಸೌದಿ ಮೇಲೆ ಇಟಲಿ ದಾಳಿ ನಡೆಸಲು ಕಾರಣವಿದೆ. ತನ್ನ ವಿರೋಧಿ ದೇಶಗಳಿಗೆ ಇಂಧನವನ್ನು ಸೌದಿ ಪೂರೈಸುತ್ತದೆ ಎಂದು ತಿಳಿದು ಬಹರೇನ್ ಮತ್ತು ಸೌದಿ ಮೇಲೆ ಬಾಂಬ್ ದಾಳಿ ನಡೆಸಿತು. ಈ ದಾಳಿಯಿಂದ ಸೌದಿಗೆ ಕಚ್ಚಾ ತೈಲ ಉತ್ಪಾದನೆ ಮಾಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕ ಸೌದಿಯ ರಕ್ಷಣೆಗೆ ಮುಂದಾಯಿತು. ಇದನ್ನೂ ಓದಿ: ಇರಾನ್-ಅಮೆರಿಕಾಸಂಘರ್ಷ ಅಂತ್ಯ; 14 ಅಂಶಗಳ ಅಡಿ ಉಭಯ ರಾಷ್ಟ್ರಗಳ ಶಾಂತಿ ಒಪ್ಪಂದ

ಎರಡನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ಮಧ್ಯೆ ಶೀತಲ ಸಮರ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೆಲ ದೇಶಗಳು ಅಮೆರಿಕ ಪರ ನಿಂತರೆ ಕೆಲವು ಯುಎಸ್‌ಎಸ್‌ಆರ್ ಪರ ನಿಂತವು. ಸೌದಿ ಅರೇಬಿಯಾ ದೇಶವಾಗಿದ್ದರೂ ಸರಿಯಾದ ಸೇನಾ ಬಲವನ್ನು ಹೊಂದಿರಲಿಲ್ಲ. ಈ ವೇಳೆ ಸೌದಿ ಅರೇಬಿಯಾದಲ್ಲಿರುವ ತೈಲ ಸಂಪತ್ತು ಮುಂದೆ ಇಡೀ ವಿಶ್ವವನ್ನೇ ಆಳಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಅಮೆರಿಕ ಸೌದಿ ರಕ್ಷಣೆಗೆ ಮುಂದಾಗುತ್ತದೆ. ಸೌದಿಯ ರಾಜಮನೆತನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.
ಸೌದಿಯಲ್ಲಿರುವ ಎಲ್ಲಾ ತೈಲ ಕೊರೆಯುವ ಬಾವಿಗಳಿಗೆ ನಾವು ಸಂಪೂರ್ಣ ರಕ್ಷಣೆ ನೀಡುತ್ತೇವೆ. ಇದಕ್ಕೆ ಪ್ರತಿಯಾಗಿ ನೀವು ಎಲ್ಲಾ ದೇಶಗಳ ಜೊತೆ ತೈಲ ವ್ಯವಹಾರ ಮಾಡಲು ಡಾಲರ್ ಅನ್ನು ಬಳಸಬೇಕು ಎಂದು ಷರತ್ತನ್ನು ಅಮೆರಿಕ ವಿಧಿಸುತ್ತದೆ. ಬೇರೆ ದೇಶಗಳು ದಾಳಿ ಮಾಡಬಹುದು ಎಂಬ ಭಯದಿಂದ ಸೌದಿ ಈ ಷರತ್ತನ್ನು ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕುತ್ತದೆ. ಷರತ್ತಿನಿಂದಾಗಿ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯಲು ಆರಂಭವಾಯಿತು. ಈ ಒಪ್ಪಂದ ಪರಿಣಾಮ ಡಾಲರ್ ಮೌಲ್ಯ ಹೆಚ್ಚಾಯಿತು ಜೊತೆಗೆ ವಿಶ್ವದ ಪ್ರಬಲ ಕರೆನ್ಸಿಯಾಗಿ ಬದಲಾಯಿತು.
