ಭಾರತದ ಯಾವುದೇ ಮೂಲೆಗೆ ಹೋದರೂ ನಮಗೆ ಒಂದಲ್ಲ ಒಂದು ರೀತಿ ಮಹಾಭಾರತ (Mahabharat), ರಾಮಾಯಣದ (Ramayana) ಕುರುಹುಗಳು ಸಿಕ್ಕೇ ಸಿಗುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಕಡೆಗಳಲ್ಲಿ ರಾಮ ಪೂಜಿಸಿ ಹೋದ ಶಿವಲಿಂಗ, ಸೀತೆಗೆ ಬಾಯಾರಿಕೆಯಾದಾಗ ರಾಮ ತನ್ನ ಬಿಲ್ಲಿನಿಂದ ಬಾಣ ಹೂಡೆದು ಅಂತರ್ಜಲ ಚಿಮ್ಮಿಸಿದ ಕ್ಷೇತ್ರಗಳ ಕತೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಇಂತಹ ನೂರಾರು ಕತೆಗಳನ್ನು ನಮ್ಮ ಊರುಗಳಲ್ಲಿನ ಅಜ್ಜ ಅಜ್ಜಿಯಂದಿರೂ ಈಗಲೂ ಹೇಳುತ್ತಲೇ ಇರುತ್ತಾರೆ. ಅದೇ ರೀತಿಯ ಒಂದು ಸ್ಥಳ ನಮ್ಮ ಮಲೆನಾಡಿನ ಹೊನ್ನೆಮರಡಿನಲ್ಲಿರುವ (Honnemaradu) ಭೀಮನ ಹೆಜ್ಜೆ. ಕೇಳಿದರೆ ಒಂದು ರೀತಿ ಆಶ್ಚರ್ಯವಾಗುತ್ತದೆ ಅಲ್ವಾ?
ನನಗೆ ಈ ಭೀಮನ ಹೆಜ್ಜೆಯನ್ನು (Bhimana Hejje) ತೋರಿಸಿದ್ದು, ಅದರ ಕತೆ ಹೇಳಿದ್ದು ಸ್ನೇಹಿತ ರಾಘು. ಏಳನೇ ತರಗತಿಯಲ್ಲಿ ಓದುವಾಗ ಅವನು ನಾನು ಅಲ್ಲಿಗೆ ಹೋಗಿದ್ವಿ. ಆಗ ಅವನು ನನಗೆ ಈ ದಟ್ಟಾರಣ್ಯದ ಬೆಟ್ಟದ ತುತ್ತ ತುದಿಯಲ್ಲಿದ್ದ ಭೀಮನ ಹೆಜ್ಜೆಯ ಗೈಡ್!
ಭೀಮನ ಹೆಜ್ಜೆ ಇರೋದೆಲ್ಲಿ?
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಹೊನ್ನೆಮರಡು ಬಳಿಯ ಬೃಹತ್ ಬೆಟ್ಟವೊಂದರಲ್ಲಿ ಭೀಮನ ಹೆಜ್ಜೆ ಇದೆ. ಇದೆ ರೀತಿ ಅಕ್ಕಪಕ್ಕದ ಗುಡ್ಡಗಳಲ್ಲೂ ಇವೆ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ. ಆದರೆ ಆ ಭಯಾನಕ ಬೆಟ್ಟಗಳಿಗೆ ಕರೆದೊಯ್ದು ತೋರಿಸಿದವರು ಯಾರೂ ಇಲ್ಲ.
ಏನಿದು ಭೀಮನ ಹೆಜ್ಜೆ?
ಮಹಾಭಾರತದ ಕಾಲದಲ್ಲಿ ವಾನವಾಸ ಹಾಗೂ ಅಜ್ಞಾತ ವಾಸದಲ್ಲಿದ್ದ ಪಾಂಡವರು ಕಾಡುಗಳನ್ನು ಸುತ್ತುತ್ತಾ ಇಲ್ಲಿಗೆ ಬಂದಿದ್ದರಂತೆ. ಆಗ ಭೀಮ ಧಣಿವಾರಿಸಿಕೊಳ್ಳಲು ಕುಳಿತಿದ್ದ ಬಂಡೆಯ ಮೇಲೆ ಆತನ ಬೃಹತ್ ಹೆಜ್ಜೆಗಳು ಮೂಡಿವೆ. ಇದೇ ಕಾರಣಕ್ಕೆ ಆ ಜಾಗದ ಹೆಸರಿಗೂ ಭೀಮನ ಹೆಜ್ಜೆ ಎಂಬ ಹೆಸರು ಬಂದಿದೆ.
ಇದರ ಬಗ್ಗೆ ವಿವರಿಸಿದ್ದ ರಾಘು, ಭೀಮ ಇಲ್ಲೇ ಕುಳಿತಿದ್ದ. ಇಲ್ಲೆಲ್ಲ ಬಿದ್ದ ಸಣ್ಣ ಪುಟ್ಟ ಕಲ್ಲುಗಳು ಅವನು ಎಲೆ ಅಡಿಕೆ ಹಾಕಿ ಉಗುಳಿದ ಅಡಿಕೆಯ ಚೂರುಗಳು ಎಂದು ಹೇಳಿದ್ದ. ಇದು ಸ್ಥಳೀಯ ನಂಬಿಕೆ. ಇದಕ್ಕೆ ಯಾವ ಉಲ್ಲೇಖಗಳೂ ಇಲ್ಲ.
ಭೀಮ ಇಲ್ಲಿಗೆ ಬಂದಿದ್ದು ನಿಜನಾ ರಾಘು ಅಂತ ಕೇಳಿದ್ದಕ್ಕೆ, ಬಂದಿದ್ರು ಬಂದಿರಬಹುದು! ಇಲ್ಲದೇ ಇದ್ರೆ ಹಿಂದಿನ ಕಾಲದಲ್ಲಿ ದನ ಕಾಯೋ ಹುಡುಗರು ಯಾರೋ ಕೆತ್ತಿದ್ರೂ ಕೆತ್ತಿರಬಹುದು ಅಂದ. ಆದೇನೇ ಇರಲಿ, ಈ ಹೆಜ್ಜೆಗಳು ಮಾತ್ರ ಅದ್ಭುತವಾಗಿವೆ.
ಇಲ್ಲಿ ಕುಳಿತು ಸೀದಾ ಮತ್ತೊಂದು ಬೆಟ್ಟಕ್ಕೆ ಭೀಮ ಹೆಜ್ಜೆ ಇಟ್ಟಿದ್ದಾನಂತೆ. ಹಾಗೆ ಭೀಮ ಹೆಜ್ಜೆ ಇಟ್ಟಕಡೆಗಳಲ್ಲೆಲ್ಲ ಅಂತಹ ಹೆಜ್ಜೆಗಳು ಮೂಡಿವೆಯಂತೆ. ಆದರೆ ಭಯಾನಕ ಕಾಡು ಪ್ರಾಣಿಗಳಿರುವ ಆ ಬೆಟ್ಟಗಳನ್ನು ಹತ್ತಿ ಹೋಗಿ ನೋಡುವ ಧೈರ್ಯ ಯಾರಿಗಿದೆ ಹೇಳಿ!
ಬಾಲ ಭೀಮನನ್ನು ಕುಂತಿ ಬಂಡೆ ಮೇಲೆ ಕೆಡವಿದ್ದಳಂತೆ!
ಭೀಮನ ಹೆಜ್ಜೆ ಬಂಡೆ ಮೇಲೆ ಮೂಡಿದೆ ಅಂದ್ರೆ ಆತ ಎಷ್ಟು ತೂಕ ಇದ್ದ ಎಂಬ ಬಗ್ಗೆ ಸುಮ್ನೆ ಯೋಚಿಸುವಾಗ, ಆತ ಮಗುವಾಗಿದ್ದಾಗಿನ ಕತೆ ನೆನಪಾಯ್ತು.
ತಾಯಿ ಕುಂತಿ ಹಾಲುಣಿಸುವಾಗ ಮಗುವಾಗಿದ್ದ ಭೀಮ ಆಕಸ್ಮಿಕವಾಗಿ ಜಾರಿ ಬಂಡೆಯ ಮೇಲೆ ಬಿದ್ದಿದ್ದನಂತೆ. ಆತಂಕದಲ್ಲಿ ಕುಂತಿ ಮಗನಿಗೆ ಏನಾಯ್ತು ಎಂದು ಕೆಳಗೆ ಬಂದು ನೋಡಿದರೆ ಭೀಮ ನಗುತ್ತಿದ್ದನಂತೆ. ಬಂಡೆ ಚೂರುಚೂರಾಗಿತ್ತಂತೆ. ಈ ಕತೆ ಕೇಳಿದರೆ, ಆ ಬಂಡೆಯ ಮೇಲೆ ಮೂಡಿರುವ ಹೆಜ್ಜೆಗಳು ಭೀಮನದ್ದೇ ಎಂಬುದರಲ್ಲಿ ಯಾವ ಸಂಶಯ ಬೇಡ ಎನಿಸುತ್ತದೆ.
ಮನಸ್ಸಿಗೆ ಮುದಕೊಡುವ ಸ್ಥಳ
ಈ ಬೆಟ್ಟದ ತುದಿಗೆ ತಲುಪಿದಾಗ ಕಾಣಿಸುವ ದೃಶ್ಯ ಮನಸ್ಸಿನಲ್ಲಿ ಬಹುಕಾಲ ಅಚ್ಚಳಿಯದೆ ಉಳಿಯುವಂಥದ್ದು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಪುಟ್ಟ ದ್ವೀಪಗಳು, ದೂರದ ಬೆಟ್ಟಗಳ ಸಾಲು, ನೀರಿನ ಮೇಲೆ ಚಲಿಸುವ ಮೋಡಗಳ ನೆರಳು, ಮಂಜಿನ ಮುಸುಕು ಇವೆಲ್ಲವೂ ಸೇರಿ ಪ್ರಕೃತಿಯ ಸುಂದರ ಚಿತ್ರವನ್ನೇ ಸೃಷ್ಟಿಸುತ್ತವೆ.
ಭೀಮನ ಹೆಜ್ಜೆಗೆ ತೆರಳುವ ಚಾರಣ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತದೆ. ದಾರಿಯುದ್ದಕ್ಕೂ ಸಿಗುವ ಹಸಿರು ಪರಿಸರ, ಕಾಡಿನ ನಿಶ್ಶಬ್ದತೆ, ತಂಪಾದ ಗಾಳಿ ನಗರದ ಜಂಜಾಟದಿಂದ ದೂರವಾಗಿಸುತ್ತವೆ. ಇಲ್ಲಿ ಪ್ರಕೃತಿಯನ್ನು ಕೇವಲ ನೋಡುವುದಷ್ಟೇ ಅಲ್ಲ, ಅದರೊಂದಿಗೆ ಬೆರೆಯುವ ಅವಕಾಶವೂ ಸಿಗುತ್ತದೆ.
ಭೀಮನ ಹೆಜ್ಜೆಗೆ ಹೋಗುವುದು ಹೇಗೆ?
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನ್ನೆಮರಡು ಬಳಿ ಭೀಮನ ಹೆಜ್ಜೆ ತಾಣವಿದೆ. ತಾಳಗುಪ್ಪದಿಂದ 10-12 ಕಿಮೀ ದೂರದಲ್ಲಿ ಈ ಸ್ಥಳವಿದ್ದು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ.
ಭೀಮನ ಹೆಜ್ಜೆಯ ಚಾರಣಕ್ಕೆ ತೆರಳುವವರು ಸ್ಥಳೀಯರ ನೆರವು ಪಡೆಯುವುದು ಸೂಕ್ತ. ಹಿನ್ನೀರಿನ ಪ್ರದೇಶವಾದ್ದರಿಂದ ನೀರಿನ ಮಟ್ಟ ಮತ್ತು ಹವಾಮಾನವನ್ನು ಗಮನಿಸಬೇಕು. ಅಲ್ಲದೇ ಕಾಡು ಪ್ರಾಣಿಗಳ ಭಯಕೂಡ ಇಲ್ಲಿ ಇದೆ. ಈ ಪರಿಸರದಲ್ಲಿ ಪ್ಲಾಸ್ಟಿಕ್ ಎಸೆಯದೆ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿ ಕೂಡ ಹೌದು.
ಕರ್ನಾಟಕದಲ್ಲಿ ಇನ್ನೂ ಎಲ್ಲೆಲ್ಲಿ ಭೀಮನ ಹೆಜ್ಜೆಗಳಿವೆ?
ನೆಲಮಂಗಲದ ಸಮೀಪದ ಮಾಕಳಿ ಬಳಿ ಸಹ ಭೀಮನ ಹೆಜ್ಜೆಯ ಗುರುತುಗಳಿವೆ. ಇಲ್ಲಿನ ಬಂಡೆಯೊಂದರ ಮೇಲೆ ದೊಡ್ಡ ಪಾದದ ಗುರುತು ಕಾಣಸಿಗುತ್ತದೆ. ಇಲ್ಲಿಗೆ ಸಮೀಪದಲ್ಲಿ ಪ್ರಾಚೀನ ಭೀಮೇಶ್ವರ ದೇವಾಲಯವೂ ಇದೆ.
ಭೀಮ ಬಕಾಸುರ ಬೆಟ್ಟ (ಕೈವಾರ / ಚಿಂತಾಮಣಿ ಭಾಗ): ಬಕಾಸುರನ ವಧೆ ಮತ್ತು ಪಾಂಡವರ ಸಂಚಾರದ ಕಥೆಗಳೊಂದಿಗೆ ಗುರುತಿಸಿಕೊಂಡಿರುವ ಬೆಟ್ಟದ ಪ್ರದೇಶ.
ಅಪ್ಸರಕೊಂಡ / ಪರಶುರಾಮ ಪಾರ್ಕ್ ಇಲ್ಲಿ ಸಹ ಭೀಮನ ಹೆಜ್ಜೆ ಇದೆ.
– ಗೋಪಾಲಕೃಷ್ಣ
