ಬೆಂಗಳೂರು: ಜಿಲ್ಲಾ ಸಮಾವೇಶಗಳು ಹಾಗೂ 4 ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumr Kateel) ಅವರು ವಿವರಿಸಿದರು.
ಬೆಂಗಳೂರಿನ ಅರಮನೆ ಮೈದಾನ (Palace Ground) ದಲ್ಲಿ ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷವು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಶಾಸಕರ ಸ್ಥಾನ ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸದಿಂದ ನುಡಿದರು. ಬೂತ್ ಬೂತ್, ಗ್ರಾಮಗಳಲ್ಲಿರುವ ಫಲಾನುಭವಿಯ ಮನಸ್ಸಿನಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣ ನಮ್ಮ ಪರ ಇದೆ. ಬೂತ್ ವಿಜಯ, ಬೂತ್ ಸಂಕಲ್ಪ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
Advertisement
Advertisement
ರಾಜ್ಯದ ಡಬಲ್ ಎಂಜಿನ್ ಸರ್ಕಾರ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದೆ. ಒಬ್ಬೊಬ್ಬ ಶಾಸಕರ ಕ್ಷೇತ್ರಕ್ಕೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಕೇಂದ್ರ- ರಾಜ್ಯ ಸರ್ಕಾರಗಳು ಅತ್ಯಂತ ಸಮರ್ಥವಾಗಿ ಕಾರ್ಯ ಮಾಡುತ್ತಿವೆ. ರೈತ ವಿದ್ಯಾ ನಿಧಿಯಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಆರು ಸಾವಿರ ಮತ್ತು ರಾಜ್ಯ ಸರ್ಕಾರ (State Government) ನಾಲ್ಕು ಸಾವಿರ ಕೊಡುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಬಂಜಾರ ಸಮುದಾಯಕ್ಕೆ 50 ಸಾವಿರ ಹಕ್ಕುಪತ್ರಗಳನ್ನು ಹಂಚಲಾಗಿದೆ. ಗೋವುಗಳಿಗೆ ಅಂಬುಲೆನ್ಸ್ ಆರಂಭಿಸಿದ ಪ್ರಥಮ ಸರ್ಕಾರವಾಗಿ ಕರ್ನಾಟಕ ಗುರುತಿಸಿಕೊಂಡಿದೆ ಎಂದು ಸಾಧನೆಗಳ ವಿವರ ನೀಡಿದರು.
Advertisement
ಹೈನುಗಾರಿಕೆ ಬ್ಯಾಂಕ್ ತೆರೆಯಲಾಗಿದೆ. ಬೊಮ್ಮಾಯಿಯವರ ನೇತೃತ್ವ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯ ಮುನ್ನಡೆದಿದೆ ಎಂದರಲ್ಲದೆ, ಇವತ್ತು ಕಾಂಗ್ರೆಸ್ ಪಕ್ಷವು ಬಸ್ ಯಾತ್ರೆ ಜೊತೆಗೇ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮುಂದುವರಿಸಿದೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಒಬ್ಬರಿಗೆ ಕ್ಷೇತ್ರ ಹುಡುಕಾಡಿ ಮುಗಿದಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.
Advertisement
ಪರಮೇಶ್ವರ್, ಮುನಿಯಪ್ಪರ ಹೋರಾಟದಿಂದ ಕಾಂಗ್ರೆಸ್ ಬಸ್ ಪಂಕ್ಚರ್ ಆಗುತ್ತಿದೆ. ಕಾಂಗ್ರೆಸ್ ಕಾಳಗ ಬೀದಿಕಾಳಗವಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ಬಿಜಾಪುರ ತಲುಪುವಾಗ ಹಾಸನದಲ್ಲಿ ಮನೆಯೊಳಗೆ ಜಗಳ ಆರಂಭವಾಗಿದೆ. ಆದ್ದರಿಂದ ಬಿಜೆಪಿ ಜನರ ವಿಶ್ವಾಸದ ಪಕ್ಷವಾಗಿ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.
ವಿಶ್ವನಾಯಕತ್ವದ ಕಾಲಘಟ್ಟ ಹತ್ತಿರದಲ್ಲಿದೆ: ಭಾರತ ವಿಶ್ವನಾಯಕನಾಗುವ ಸಂದರ್ಭದಲ್ಲಿ ನಾವಿದ್ದೇವೆ. ಜಗತ್ತಿನ ಅತಿ ಹೆಚ್ಚು ಜನಬೆಂಬಲ ಇರುವ ನಾಯಕರಾಗಿ ಮೋದಿಜಿ ಹೊರಹೊಮ್ಮಿದ್ದಾರೆ. ಮೋದಿಜಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ಭಾರತದ ಗೌರವ ಹೆಚ್ಚಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ವಿಶ್ಲೇಷಿಸಿದರು.
ಜಗತ್ತು ಇವತ್ತು ಭಾರತದ ಕಡೆ ನೋಡುತ್ತಿದೆ. ಒಂದು ಕಾಲದಲ್ಲಿ ಹಾವಾಡಿಗರ ದೇಶ, ಭಿಕ್ಷುಕರ ದೇಶ, ಸಾಲಗಾರರ ದೇಶ ಎಂದು ಕರೆಸಿಕೊಂಡಿದ್ದ ಭಾರತ ಇಂದು ಅಭಿವೃದ್ಧಿಶೀಲ- ಸಶಕ್ತ ದೇಶವಾಗಿ ಹೊರಹೊಮ್ಮಿದೆ. ಉಕ್ರೇನ್- ರಷ್ಯಾ (Ukraine- Russia) ನಡುವಿನ ಯುದ್ಧ ನಿಲ್ಲಿಸಿ ಅಲ್ಲಿದ್ದ ನಮ್ಮ ವಿದ್ಯಾರ್ಥಿಗಳನ್ನು ಕರೆತರುವ ಸಾಮರ್ಥ್ಯ ಅನಾವರಣಗೊಂಡಿದೆ ಎಂದು ವಿವರಿಸಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಉಚಿತ ಕೋವಿಡ್ ಲಸಿಕೆ (Corona Virus) ಕೊಟ್ಟ ದೇಶ ಭಾರತ. ಭಾರತ ಇದೀಗ ಸ್ವಾಭಿಮಾನಿ, ಸಮೃದ್ಧಿಯ ದೇಶವಾಗಿ ಎದ್ದು ನಿಂತಿದೆ. 2009ರಿಂದ 2014ರವರೆಗೆ ಮನಮೋಹನ್ ಸಿಂಗ್ ಅವರ ಆಡಳಿತ ಇತ್ತು. ಆ ಅವಧಿಯಲ್ಲಿ ನನ್ನ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಅನುದಾನ, ಸಿಆರೆಫ್ ಫಂಡ್ ಬರುತ್ತಿರಲಿಲ್ಲ. ಆಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರಲಿಲ್ಲ. ಆದರೆ ಇವತ್ತು ಪರಿವರ್ತನೆ ಆಗಿದೆ. ರಾಜ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದಿದೆ. ಹಳ್ಳಿ ಹಳ್ಳಿಗೆ ಸಡಕ್ ರಸ್ತೆ ಬರುತ್ತಿದೆ. ಮನೆಮನೆಗೆ ಗಂಗಾ ಯೋಜನೆ ತಲುಪುತ್ತಿದೆ. ಗ್ರಾಮ ಪಂಚಾಯಿತಿಗೆ ಒಂದೊಂದು ಕೋಟಿ ಅನುದಾನ ಸಿಗುವಂತಾಗಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ (Narendra Modi)ಜಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಶಕ್ತ ಭಾರತ ನಿರ್ಮಾಣಕ್ಕೆ ಪೂರಕ ಎನಿಸಿದ ದೂರದೃಷ್ಟಿಯ ಬಜೆಟ್ ಮಂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಿದ ಪ್ರಧಾನಿ ಮೋದಿಜಿ, ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳು ಎಂದು ತಿಳಿಸಿದರು.
ರೈತಪರ, ಮಹಿಳಾ ಪರ, ಯುವಕರಿಗೆ ಉದ್ಯೋಗ ನೀಡುವ ಬಜೆಟ್ ದೇಶದ ದಿಕ್ಕನ್ನು ಬದಲಿಸುವ ವಿಶ್ವಾಸ ಇದೆ ಎಂದ ಅವರು, ಹತ್ತಾರು ವರ್ಷಗಳಿಂದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ಕೊಡುತ್ತಾ ಬರಲಾಗುತ್ತಿದೆ. ಈ ಬಾರಿ ಕರ್ನಾಟಕಕ್ಕೆ 8 `ಪದ್ಮ’ ಪ್ರಶಸ್ತಿ ಲಭಿಸಿದೆ. ಹಿಂದೆ ಅರ್ಜಿ ಹಿಡಿದು ಹೋದವರಿಗೆ, ಮಂತ್ರಿಗಳ ಹಿಂದೆ ಸುತ್ತಿದವರಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ಸಮಾಜದಲ್ಲಿ ತಮಟೆವಾದಕ ಮುನಿವೆಂಕಟಪ್ಪ, ರಾಣಿ ಮಾಚಯ್ಯ ಸೇರಿ ಅರ್ಹರಿಗೆ ಪ್ರಶಸ್ತಿ ಸಿಕ್ಕಿದೆ. ಎಸ್.ಎಲ್.ಭೈರಪ್ಪ, ಸುಧಾಮೂರ್ತಿ, ಎಸ್.ಎಂ.ಕೃಷ್ಣರಿಗೂ ಪ್ರಶಸ್ತಿ ಸಿಕ್ಕಿದ್ದು ಅವರೆಲ್ಲರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರು ಮಾತನಾಡಿ, ಮೂರ್ನಾಲ್ಕು ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಇದು ಅತ್ಯಂತ ಮಹತ್ವದ ಸಭೆ ಎಂದರು. ಪಕ್ಷದ ಸಿದ್ಧತೆ, ಜನರ ಒಲವು, ಹಿರಿಯರ ವಿಶ್ಲೇಷಣೆ ಗಮನಿಸಿದರೆ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಬಳಿ ಸಕ್ರಿಯ- ಸದೃಢ ಕಾರ್ಯಕರ್ತರ ಶಕ್ತಿ ಇದೆ. ಬಿಜೆಪಿ ನಿರಂತರವಾಗಿ ದೇಶಸೇವೆ, ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಬೂತ್ ಕಮಿಟಿ, ಪೇಜ್ ಸಮಿತಿ ಸೇರಿ ಅಭೇದ್ಯ ಸಂಘಟನೆ ನಮ್ಮ ಪಕ್ಷದ್ದು. ಇಂಥ ಸಂಘಟನೆ ಬೇರೆ ಪಕ್ಷಗಳ ಬಳಿ ಇಲ್ಲ ಎಂದು ವಿಶ್ಲೇಷಿಸಿದರು.
ಬೂತ್ ವಿಜಯ, ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಮಾಡಿದ ಕಾರ್ಯಕರ್ತರು ಮತ್ತು ಮುಖಂಡರನ್ನು ಅಭಿನಂದಿಸಿದರು. ಬಡವರಿಗೆ ಮನೆ, ಉಚಿತ ಕೋವಿಡ್ ಲಸಿಕೆ, 80 ಕೋಟಿ ಜನರಿಗೆ ಉಚಿತ ಪಡಿತರ ಸೇರಿದಂತೆ ವಿವಿಧ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಕಾಲದಲ್ಲಿ ಸ್ಥಗಿತಗೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ಗರಿಷ್ಠ ಅನುದಾನ ನೀಡಿದ್ದಕ್ಕಾಗಿ ಮೋದಿಜಿ ಅವರನ್ನು ಅಭಿನಂದಿಸಿದರು.
ಸಮರ್ಥ ನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷ: ಕಾಂಗ್ರೆಸ್ ಪಕ್ಷ (Congress Party) ನಾಯಕರು, ನೀತಿ ಇಲ್ಲದ ಪಕ್ಷ. ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ದೃಷ್ಟಿಹೀನ ಪಕ್ಷವದು. ರಾಹುಲ್ ಗಾಂಧಿಯವರು ಏನು ಹೇಳುತ್ತಾರೆಂದು ಯಾರಿಗೂ ಅರ್ಥ ಆಗುವುದಿಲ್ಲ. ತುಷ್ಟೀಕರಣದ ನೀತಿ ಕಾಂಗ್ರೆಸ್‍ನದು. ಸಿದ್ದರಾಮಯ್ಯ ಆಡಳಿತದಲ್ಲಿ ಪಿಎಫ್‍ಐಗೆ ಪ್ರೋತ್ಸಾಹ, ಹಿಂದೂಗಳ ಹತ್ಯೆ ನಿರಂತರವಾಗಿತ್ತು ಎಂದು ಅರುಣ್ ಸಿಂಗ್ ಟೀಕಿಸಿದರು.
ಹಿಂದೂಗಳ ಅವಹೇಳನ ಮಾಡುವ ಕೆಲಸವನ್ನೇ ಸಿದ್ದರಾಮಯ್ಯ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ನೆಲಕಚ್ಚುವ ಸ್ಥಿತಿ ತಲುಪಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಭರವಸೆ ಕೇವಲ ಆಶ್ವಾಸನೆಯಾಗಿಯೇ ಉಳಿಯುತ್ತದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷ ಸುಳ್ಳುಗಳ ಸರದಾರನಂತಿದೆ ಎಂದು ಆರೋಪಿಸಿದರು. ರಾಜಸ್ಥಾನ, ಛತ್ತೀಸಗಡದಲ್ಲೂ ಅದು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ನೆನಪಿಸಿದರು.
ವಿಶ್ವಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಒಂದಲ್ಲ ಒಂದು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ನೀಡಿದ್ದಾರೆ. ಯಡಿಯೂರಪ್ಪ- ಬೊಮ್ಮಾಯಿ ಸರಕಾರವು ರೈತರು, ಮಹಿಳೆಯರು, ಜನಸಾಮಾನ್ಯರು ಸೇರಿ ಎಲ್ಲರಿಗಾಗಿ ಕೆಲಸ ಮಾಡಿದೆ. ಇದನ್ನು ಜನರಿಗೆ ತಲುಪಿಸಿ ನಾವು 150 ಸೀಟ್ ಗೆಲ್ಲುತ್ತೇವೆ ಎಂದರು. ಮೋದಿಜಿ, ಯಡಿಯೂರಪ್ಪ, ಕಾಮನ್ ಮ್ಯಾನ್ ಬಸವರಾಜ ಬೊಮ್ಮಾಯಿ ಸೇರಿ ನಾಯಕಗಣವೇ ನಮ್ಮಲ್ಲಿದೆ. ಇವೆಲ್ಲವೂ ನಮ್ಮ ಗೆಲುವಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B S Yediyurappa) ಅವರು ಮಾತನಾಡಿ, ಕಾಂಗ್ರೆಸ್ ಮುಖಂಡ ಯಾರು ರಾಹುಲ್ ಗಾಂಧಿಯೇ? ವಿಶ್ವವೇ ಮೆಚ್ಚಿದ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ ಅವರು ನಮ್ಮ ಜೊತೆ ಇರಬೇಕಾದರೆ ಬರುವಂಥ ಕರ್ನಾಟಕ ಸೇರಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ನುಡಿದರು.
ಕರ್ನಾಟಕದ ಯಾವುದಾದರೂ ಮನೆಗೆ ಹೋಗಿ ಸರಕಾರದ ಸವಲತ್ತು ಸಿಗದ ಒಂದು ಮನೆ ಇದ್ದರೆ ತಿಳಿಸಿ ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚಿಸಿದ ಅವರು, ಸರ್ವರಿಗೂ ಸಮಬಾಳು, ಸಮಪಾಲು ಚಿಂತನೆಯಡಿ ಅನೇಕ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟಿವೆ. ಕರ್ನಾಟಕದ ಬಜೆಟ್ ಸಂದರ್ಭದಲ್ಲೂ ನಿರೀಕ್ಷೆಗೆ ಮೀರಿ ಸವಲತ್ತುಗಳನ್ನು ಕೊಡಲಿದ್ದೇವೆ ಎಂದು ಪ್ರಕಟಿಸಿದರು.
ಪ್ರಪಂಚದ ಎಲ್ಲ ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಭಾರತದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೆ, ಭಾರತವು ವಿಶ್ವವೇ ಮೆಚ್ಚುವ ರೀತಿಯಲ್ಲಿ ದಾಪುಗಾಲು ಹಾಕುತ್ತಿದೆ. ಯಾವುದೇ ಶಕ್ತಿ ಕೂಡ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಅಸಾಧ್ಯ ಎಂದು ವಿಶ್ವಾಸದಿಂದ ನುಡಿದರು. ಈ ಆತ್ಮವಿಶ್ವಾಸ ನಮ್ಮದಾಗಿರಲಿ ಎಂದು ಹುರಿದುಂಬಿಸಿದರು.
ಪರಿಶಿಷ್ಟ ಜಾತಿ, ವರ್ಗದವರ ಸಮಸ್ಯೆ ಪರಿಹರಿಸಬೇಕು. ಎಲ್ಲ ವರ್ಗದವರ ವಿಶ್ವಾಸ ಪಡೆದುಕೊಳ್ಳಿ. ಇದು 130ರಿಂದ 140 ಸ್ಥಾನ ಗೆಲ್ಲಲು ಸಹಾಯಕ ಎಂದು ಕಿವಿಮಾತು ಹೇಳಿದರು. ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನೂ ಅದು ಕೊಡುತ್ತಿದೆ. ಬಡ ಹೆಣ್ಣುಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಸುಮಾರು 25 ಲಕ್ಷ ಜನರಿಗೆ ಸವಲತ್ತು ಪಡೆದಿದ್ದಾರೆ ಎಂದು ವಿವರಿಸಿದರು.
22 ಕೋಟಿಗೂ ಹೆಚ್ಚು ಮನೆಗೆ ಮನೆಮನೆಗೆ ಗಂಗೆ ಯೋಜನೆಯಡಿ ನಳ್ಳಿನೀರಿನ ಸಂಪರ್ಕ ಕೊಡಲಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುತ್ತಿದ್ದೇವೆ. ವಿಕಾಸಸೌಧದ ಬಳಿ ಡಾ.ಅಂಬೇಡ್ಕರರ ಸ್ಫೂರ್ತಿ ಭವನ ನಿರ್ಮಿಸಲಾಗುತ್ತಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ನೇಕಾರ ಸಮುದಾಯಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ, ಬಂಜಾರ ಸಮುದಾಯಕ್ಕೆ ಹಕ್ಕುಪತ್ರ, ಗ್ರಾಮ ಒನ್ ಯೋಜನೆ ಜಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರದಿಂದ 5,300 ಕೋಟಿ ನೀಡಿದ್ದು, ಪ್ರಧಾನಿ ಮೋದಿಜಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಕೃಷಿಗೆ ಒತ್ತು, ಇಂಧನ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದು, ಇದು ದೂರದೃಷ್ಟಿಯ ಚಿಂತನೆ ಎಂದರು.
ಕಾಂಗ್ರೆಸ್ ಯಾತ್ರೆ ಪಂಕ್ಚರ್ ಆಗಲಿದೆ: ಕಾಂಗ್ರೆಸ್ 2 ಬಸ್ ಯಾತ್ರೆ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ಪರಮೇಶ್ವರ್ ಅವರು ಅಸಮಾಧಾನ ಸೂಚಿಸಿದ್ದಾರೆ ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ ಎಂದು ಯಡಿಯೂರಪ್ಪ ನುಡಿದರು. ಕಾಂಗ್ರೆಸ್ ಕನಸು ಕಾಣುವ ಕಾಲ ಮುಗಿದಿದೆ ಎಂದು ವಿಶ್ವಾಸದಿಂದ ತಿಳಿಸಿದರು.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ನಾನು ಮತ್ತು ಅರುಣ್ ಸಿಂಗ್ 3 ತಂಡಗಳಲ್ಲಿ ಯಾತ್ರೆ ಮಾಡಲಿದ್ದೇವೆ ಎಂದು ತಿಳಿಸಿದರು.
ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಮಾತನಾಡಿ, ಅತ್ಯುತ್ತಮ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ. ಅಮೃತ ಕಾಲದ ಲಕ್ಷಣಗಳು ಕಾಣುತ್ತಿವೆ. ರಾಜ್ಯದ ಚುನಾವಣಾ ಯುದ್ಧದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ನುಡಿದರು. ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಜಗತ್ತಿನ ನಾಯಕನಾಗಿದೆ. ಇನ್ನು ಕೆಲಸವೇ ವರ್ಷಗಳಲ್ಲಿ ಅದು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಖರ್ಗೆಯನ್ನು ಸೋಲಿಸಿದರು. ಪರಮೇಶ್ವರರನ್ನು ಮುಗಿಸಿದರು. ಮುನಿಯಪ್ಪರನ್ನು ಮುಳುಗಿಸಲು ಹೊರಟಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್ ಎಂಬುದನ್ನು ಜನರಿಗೆ ತಿಳಿಸಬೇಕಿದೆ. ನಾವು ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ಕೊಟ್ಟದ್ದನ್ನು ತಿಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ. ಅರುಣಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಅಪೇಕ್ಷಿತರು ಭಾಗವಹಿಸಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k