ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ ಕಲಾತಪಸ್ವಿ ರಾಜೇಶ್ ಅವರ ನಿಧನದಿಂದಾಗಿ ಕನ್ನಡ ಚಿತ್ರರಂಗ ಮೇರು ಕಲಾವಿದರೊಬ್ಬರನ್ನು ಕಳೆದುಕೊಂಡಿದೆ. ಸುದರ್ಶನ ನಾಟಕ ಮಂಡಳಿ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ವಿದ್ಯಾಸಾಗರ್ ಹೆಸರಿನಿಂದ ರಾಜೇಶ್ ಗುರುತಿಸಿಕೊಂಡಿದ್ದರು ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡು ರಾಜೇಶ್ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸಂತಾಪ ಸೂಚಿಸಿದ್ದಾರೆ.
Advertisement
ಪತ್ರಿಕಾ ಪ್ರಕಟನೆ ಹೊರಡಿಸಿರುವ ಟಿ.ಎಸ್.ನಾಗಾಭರಣ, ರಾಜೇಶ್ ನಟನಾಗುವ ಮೊದಲ ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿಯಲ್ಲಿ ತಮ್ಮದೆ ನಟನ ಕೌಶಲ್ಯದಿಂದಾಗಿ ಗುರುತಿಸಿಕೊಂಡಿದ್ದ ರಾಜೇಶ್ ಅವರನ್ನು ಹುಣಸೂರು ಕೃಷ್ಣಮೂರ್ತಿ ಅವರು ವೀರ ಸಂಕಲ್ಪ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಶ್ರೀ ರಾಮಾಂಜನೇಯ ಯುದ್ಧ, ಗಂಗೆ ಗೌರಿ, ನಮ್ಮ ಊರು, ಸತೀ ಸುಕನ್ಯ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ದೇವರದುಡ್ಡು, ಸೊಸೆ ತಂದ ಸೌಭಾಗ್ಯ ಮುಂತಾದ ಚಲನಚಿತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿದ್ದ ರಾಜೇಶ್ ಅವರು ಟಿ.ಎಸ್. ನಾಗಾಭರಣ ಅವರ ವಸುಂಧರಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. 1985ರಲ್ಲಿ ಬಿಡುಗಡೆಯಾದ ಟಿ.ಎಸ್.ನಾಗಾಭರಣ ಅವರ ಚಿತ್ರಕಥೆ ಮತ್ತು ನಿರ್ದೇಶನದ ಸೇಡಿನ ಸಂಚು ಚಿತ್ರದಲ್ಲಿ ಅಮೋಘವಾಗಿ ತಮ್ಮ ನಟನ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ನಮ್ಮ ಊರು ಸಿನಿಮಾದಲ್ಲಿ ಗಾಯಕರಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್ ಫೋಟೋಸ್, ಮಾಹಿತಿ
Advertisement
Advertisement
ನಾಯಕ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲೂ ಅಭಿನಯಿಸಿದ ರಾಜೇಶ್ ಅವರು ಕನ್ನಡದ ಮೂರು ತಲೆಮಾರಿನ ಪೀಳಿಗೆಗೂ ಪರಿಚಿತರು. ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು ಎಂದು ಮೆಚ್ಚುಗೆಯ ಮಾತನಾಡಿದರು. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
Advertisement
ಕಲಾತಪಸ್ವಿಯ ನಿಧನದಿಂದಾಗಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಜನಮನ ಗೆದ್ದಿದ್ದ ರಾಜೇಶ್ ಅವರಿಗೆ ನಮ್ಮ ಅಶ್ರು ನಮನ. ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.