ಬಿಗ್‌ಬಾಸ್ (Bigg Boss) ಶೋ ಮೂಲಕ ಕನ್ನಡಿಗರ ಮನೆಗೆದ್ದ ಖ್ಯಾತ ನಟ ಗಿಲ್ಲಿ ನಟ(Gilli Nata) ಕೊನೆಗೂ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಇವೆಂಟ್‌ಗಳಲ್ಲಿ ಬ್ಯುಸಿಯಾಗಿದ್ದ ನಟನ ಮೇಲೆ ಫ್ಯಾನ್ಸ್ ಕೊಂಚ ಮುನಿಸಿಕೊಂಡಿದ್ದರು. ಆದರೆ, ಇದೀಗ ಆ ಎಲ್ಲಾ ಕಾಯುವಿಕೆಗೆ ತೆರೆ ಬಿದ್ದಿದೆ.
ಜೂನ್ 15ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ವಿಶೇಷ ಸುದ್ದಿ ಘೋಷಣೆ ಮಾಡಲಿದ್ದೇನೆ” ಎಂದು ಪೋಸ್ಟ್ ಹಾಕುವ ಮೂಲಕ ಗಿಲ್ಲಿ ಕುತೂಹಲ ಮೂಡಿಸಿದ್ದರು. ಇದು ಸಿನಿಮಾ ಸುದ್ದಿಯೇ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆಯೇ ಇದೀಗ ರಾಶಿ ಫಿಲ್ಮ್ಸ್ ಬ್ಯಾನರ್ ಅಡಿ ಗಿಲ್ಲಿ ಹೀರೋ ಆಗಿ ಅಖಾಡಕ್ಕಿಳಿಯುತ್ತಿರುವುದು ಪಕ್ಕಾ ಆಗಿದೆ.
View this post on Instagram
ಈ ಹೊಸ ಕಮರ್ಷಿಯಲ್ ಚಿತ್ರವನ್ನು ಸ್ಯಾಂಡಲ್‌ವುಡ್‌ನ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಚಂದ್ರಮೋಹನ್ ಅವರು ನಿರ್ದೇಶಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ತಾರಾಗಣದ ಬಗ್ಗೆ ಇನ್ನೂ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದ್ದು, ಜೂನ್ 21 ರಂದು ಚಿತ್ರದ ಅದ್ಧೂರಿ ಮುಹೂರ್ತ ನೆರವೇರಲಿದೆ. ಅಂದೇ ಚಿತ್ರದ ಫಸ್ಟ್ ಲುಕ್ ಅಥವಾ ಟೈಟಲ್ ರಿವೀಲ್ ಆಗುವ ಸಾಧ್ಯತೆ ಇದೆ. ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ ಸಾಥ್ ನೀಡಲಿದೆ.
ಗಿಲ್ಲಿ ಅವರು ಕಿರು ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ ಅವರು ಪ್ಯಾನ್ ಕರ್ನಾಟಕದ ಸಿನಿಮಾ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಮಂಡ್ಯ, ಮಂಗಳೂರು, ಬೆಂಗಳೂರು, ಉತ್ತರ ಕರ್ನಾಟಕದ ಭಾಷೆಯಲ್ಲಿ ಸಿನಿಮಾ ಕನಸಿನ ಬಗ್ಗೆ ಮಾತನಾಡಿದ್ದಾರೆ.
“ಒಂದು ಕನಸಿನ ಶುಭಾರಂಭ , ಕನಸಿನಿಂದ ಕ್ಯಾಮೆರಾವರೆಗೆ! ಮುಹೂರ್ತ ಇದೆ ಜೂನ್ 21 ಕ್ಕೆ. ನಮ್ಮ ಚಿತ್ರದ ಮುಹೂರ್ತಕ್ಕೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯ ಬೆಂಬಲ ಬೇಕು” ಎಂದು ಗಿಲ್ಲಿ ಬರೆದುಕೊಂಡಿದ್ದಾರೆ.
