– ಕಾಫಿ, ಕಾಳುಮೆಣಸು ಗಿಡಗಳು, ಮರಗಳಿಗೆ ಹಾನಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜಮೀನು ವಿವಾದವೊಂದು ಇದೀಗ ಕಾಫಿ ತೋಟಕ್ಕೆ ವಿಷಕಾರಿ ರಾಸಾಯನಿಕ ಸಿಂಪಡಿಸಿದ ಆರೋಪದ ಮೂಲಕ ಹೊಸ ತಿರುವು ಪಡೆದುಕೊಂಡಿದೆ. ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿ ಗ್ರಾಮದಲ್ಲಿರುವ ಬರೋಬ್ಬರಿ 32 ಎಕರೆ ವಿಸ್ತೀರ್ಣದ ಕಾಫಿ ತೋಟಕ್ಕೆ ವಿಷಕಾರಿ ರಾಸಾಯನಿಕ ಸಿಂಪಡಿಸಿ, ಕಾಫಿ ಗಿಡಗಳು, ಕಾಳುಮೆಣಸು ಗಿಡಗಳು ಹಾಗೂ ಇತರೆ ಮರಗಳಿಗೆ ಹಾನಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ವಕೀಲ ರವೀಂದ್ರನಾಥ್ ಕಾಮತ್ ಅವರಿಗೆ ಸೇರಿದ ತೋಟ ಇದಾಗಿದ್ದು, ಕಾನೂರು ಗ್ರಾಮದ ಚಪ್ಪುಡೀರ ಮೊಣ್ಣಪ್ಪ ಅಲಿಯಾಸ್ ಟ್ಯಾಗು, ಅವರ ಮ್ಯಾನೇಜರ್ ಸುಬ್ರಮಣಿ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಈ ಹಿಂದೆ ಚಪ್ಪುಡೀರ ಮೊಣ್ಣಪ್ಪ ಅವರು ತೋಟದ ನಿರ್ವಹಣೆ ಮಾಡುತ್ತಿದ್ದರು. ಆದರೆ, ಜೂನ್ 25ರಂದು ಇಬ್ಬರ ನಡುವಿನ ವ್ಯವಹಾರ ಅಂತ್ಯಗೊಂಡಿತ್ತು. ಬಳಿಕ ತೋಟದ ನಿರ್ವಹಣೆಯನ್ನು ಮಾಲೇಟಿರ ಸಾಬಾ ಮುತ್ತಪ್ಪ ಅವರಿಗೆ ವಹಿಸಲಾಗಿತ್ತು. ನವೆಂಬರ್ 11ರಿಂದ 13ರ ನಡುವಿನ ಅವಧಿಯಲ್ಲಿ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ವಿಷಕಾರಿ ರಾಸಾಯನಿಕ ಸಿಂಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ನವೆಂಬರ್ 15ರಂದು ತೋಟಕ್ಕೆ ಭೇಟಿ ನೀಡಿದ ನಿರ್ವಹಣೆಗಾರರಿಗೆ ಕಾಫಿ ಗಿಡಗಳು ಕಪ್ಪು ಬಣ್ಣಕ್ಕೆ ತಿರುಗಿರುವುದು ಹಾಗೂ ಕಾಫಿ ಕಾಳುಗಳು ಉದುರುತ್ತಿರುವುದು ಕಂಡುಬಂದಿದೆ. ಪರಿಶೀಲನೆ ನಡೆಸಿದಾಗ ವಿಷಕಾರಿ ರಾಸಾಯನಿಕ ಸಿಂಪಡಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 12 ಮಂದಿ ಕೂಲಿ ಕಾರ್ಮಿಕರ ಸಹಾಯದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪವನ್ನೂ ದೂರುದಾರರು ಮಾಡಿದ್ದಾರೆ.
ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 125/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3), 324(5) ಹಾಗೂ 3(5)ರ ಪ್ರಕಾರ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ಕಾಫಿ ತೋಟಕ್ಕೆ ರಾಸಾಯನಿಕ ಸಿಂಪಡಿಸಿದ ಆರೋಪದ ಹಿಂದಿನ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

