– ಬಿಗ್ ಬಾಸ್ ಸೀಸನ್ 11ರ ಜೋಡಿಯ ಪ್ರೀತಿಗೆ ಹೊಸ ತಿರುವು
– ಸ್ನೇಹದಿಂದ ಪ್ರೀತಿಗೆ, ಪ್ರೀತಿಯಿಂದ ಮದುವೆಯ ಹಾದಿಗೆ
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಪರಿಚಯವಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇದೀಗ ತಮ್ಮ ಸಂಬಂಧಕ್ಕೆ ಹೊಸ ಹೆಸರನ್ನಿಟ್ಟಿದ್ದಾರೆ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ, ಸ್ನೇಹವಾಗಿ ಬೆಳೆದು, ಬಳಿಕ ಪ್ರೀತಿಗೆ ತಿರುಗಿದೆ. ಇದೀಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಮ್ಮ ನಿಶ್ಚಿತಾರ್ಥದ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್, ನಮ್ಮ ಜರ್ನಿ ಪ್ರೀತಿಯಿಂದ ಶುರುವಾಗಿದ್ದಲ್ಲ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ ಸ್ನೇಹವಾಯಿತು. ಸ್ನೇಹದಿಂದ ಗೌರವ ಹೆಚ್ಚಾಯಿತು, ಬಳಿಕ ಅದು ಪ್ರೀತಿಗೆ ತಿರುಗಿತು. ಪ್ರೀತಿಸಿ ಮದುವೆಯಾಗುತ್ತೇವೆ ಎಂದು ನಾವೇ ಅಂದುಕೊಂಡಿರಲಿಲ್ಲ. ಏಕೆಂದ್ರೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಆಗಿಲ್ಲ. ಆದರೆ ಐಶ್ವರ್ಯ ಬಗ್ಗೆ ನನಗೆ ವಿಶೇಷ ಭಾವನೆ ಇತ್ತು. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ ಎಂದು ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟರು.
ಇನ್ನು ಐಶ್ವರ್ಯ ಕೂಡ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ನಾವು ಮದುವೆಯಾಗುತ್ತೇವೆ ಎಂದು ಅಂದುಕೊಂಡಿರಲಿಲ್ಲ. ನಾವೇ ಯೋಚಿಸುವುದಕ್ಕೂ ಮೊದಲೇ ಎಲ್ಲರೂ ನಮ್ಮ ಮದುವೆ ಬಗ್ಗೆ ಮಾತನಾಡುತ್ತಿದ್ದರು. ಪ್ರೀತಿಯ ಕಥೆ ಶುರುವಾಗಿದ್ದು ತುಂಬಾ ತಡವಾಗಿ. ಶಿಶಿರ್ ನನಗಾಗಿ ತೋರಿಸಿದ ಕಾಳಜಿಗೆ ನಾನು ಸೋತೆ. ಆರಂಭದಲ್ಲಿ ಪ್ರೀತಿ ಇರಲಿಲ್ಲ, ಆದರೆ ಅವರ ಮಾನವೀಯ ಗುಣಗಳನ್ನ ಕಂಡು ವ್ಯಕ್ತಿಯಾಗಿ ತುಂಬಾ ಗೌರವವಿತ್ತು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಸ್ನೇಹ, ಹೊರಜಗತ್ತಿನಲ್ಲಿ ಪ್ರೀತಿಯಾಗಿ ಅರಳಿ ಇದೀಗ ನಿಶ್ಚಿತಾರ್ಥದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಶಿಶಿರ್–ಐಶ್ವರ್ಯ ಜೋಡಿಯ ಹೊಸ ಜೀವನದ ಪಯಣಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.


