– ಯುದ್ಧ, ವೈಮಾನಿಕ ದಾಳಿಯಂತಹ ತುರ್ತುಪರಿಸ್ಥಿತಿ ಎದುರಿಸಲು ಸಿದ್ಧತೆ
ಲಕ್ನೋ: ಯುದ್ಧ ಹಾಗೂ ವೈಮಾನಿಕ ದಾಳಿಯಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ ಪರಿಶೀಲಿಸುವ ಉದ್ದೇಶದಿಂದ ಉತ್ತರ ಪ್ರದೇಶದ (Uttar Pradesh) ಎಲ್ಲಾ 75 ಜಿಲ್ಲೆಗಳಲ್ಲಿ ಇಂದು (ಭಾನುವಾರ) ಸಂಜೆ 6 ಗಂಟೆಗೆ ವಾಯುದಾಳಿ ಮತ್ತು ಬ್ಲ್ಯಾಕ್ಔಟ್ ಅಣಕು ಕಾರ್ಯಾಚರಣೆ (Blackout Mock Drill) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ನಾಗರಿಕ ರಕ್ಷಣಾ ಇಲಾಖೆಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು (DDMA), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಪೊಲೀಸ್ ಇಲಾಖೆ, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ.
ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಈ ಅಣಕು ಕಾರ್ಯಾಚರಣೆಯನ್ನು ಆಯೋಜಿಸಲಾಗುತ್ತಿದೆ ಎಂದು ನಾಗರಿಕ ರಕ್ಷಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಯುಕ್ತ ಸಮದ್ದಾರ್ ತಿಳಿಸಿದ್ದಾರೆ. ಜೊತೆಗೆ ಅಣಕು ಕಾರ್ಯಾಚರಣೆ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಇದರಿಂದ ವದಂತಿಗಳು ಹರಡುವುದನ್ನು ತಡೆಯುವುದರ ಜೊತೆಗೆ ಜನರಲ್ಲಿ ಅನಗತ್ಯ ಆತಂಕ ಉಂಟಾಗುವುದನ್ನು ತಪ್ಪಿಸಬಹುದು ಎಂದೂ ಹೇಳಿದ್ದಾರೆ.
2 ನಿಮಿಷಗಳ ಕಾಲ ಮೊಳಗಲಿದೆ ಸೈರನ್
ಸಂಜೆ 6 ಗಂಟೆಗೆ ಆರಂಭವಾಗುವ ಅಣಕು ಕಾರ್ಯಾಚರಣೆಯಲ್ಲಿ ವಾಯುದಾಳಿ ಎಚ್ಚರಿಕೆ, ಬ್ಲ್ಯಾಕ್ಔಟ್ ಕ್ರಮಗಳು ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ವೇಳೆ ಅಣಕು ಪರಿಸ್ಥಿತಿಯನ್ನು ಸೃಷ್ಟಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಸಾರ್ವಜನಿಕರು ನಿಗದಿಪಡಿಸಿದ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವ ಅಭ್ಯಾಸ ಮಾಡಲಿದ್ದಾರೆ.
ಕಾರ್ಯಾಚರಣೆಯ ಭಾಗವಾಗಿ ಸುಮಾರು 2 ನಿಮಿಷಗಳ ಕಾಲ ವಾಯುದಾಳಿ ಎಚ್ಚರಿಕೆಯ ಸೈರನ್ ಮೊಳಗಿಸಲಾಗುತ್ತದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಪರಿಹಾರ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಅಣಕು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ‘ಆಲ್ ಕ್ಲಿಯರ್’ (ಅಪಾಯ ಮುಕ್ತ) ಸೈರನ್ ಮೊಳಗಿಸುವ ಮೂಲಕ ಕಾರ್ಯಾಚರಣೆ ಮುಕ್ತಾಯದ ಸೂಚನೆ ನೀಡಲಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಮತ್ತು ತ್ವರಿತ ಪ್ರತಿಕ್ರಿಯೆ ಸಾಮರ್ಥ್ಯವನ್ನು ಪರಿಶೀಲಿಸುವುದು ಈ ಅಣಕು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ನಾಗರಿಕ ರಕ್ಷಣಾ ಇಲಾಖೆಯಲ್ಲಿ ಪ್ರಸ್ತುತ ಸುಮಾರು ಒಂದು ಲಕ್ಷ ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಇತ್ತೀಚೆಗೆ ಸ್ಥಾಪಿಸಲಾದ 60 ಹೊಸ ಜಿಲ್ಲಾ ಘಟಕಗಳಲ್ಲಿ ಸುಮಾರು 10 ಸಾವಿರ ಸ್ವಯಂಸೇವಕರನ್ನು ನೇಮಕ ಮಾಡಲಾಗಿದೆ. ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಕುರಿತು ಇವರಿಗೆ ತರಬೇತಿ ನೀಡಲಾಗುತ್ತಿದೆ.


