ಡೆಹ್ರಾಡೂನ್: ಹನಿಮೂನ್‌ಗೆ( honeymoon death) ತೆರಳಿದ್ದ 27 ವರ್ಷದ ಮಹಿಳಾ ಟೆಕ್ಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಉತ್ತರಾಖಂಡದ ಮಸ್ಸೂರಿಯಲ್ಲಿ ನಡೆದಿದೆ.
ಪಿ. ರಾಧಾ ಗಾಯತ್ರಿ ಮೃತ ಮಹಿಳೆ. ಅವರು ಗುರುಗ್ರಾಮದ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೆಹಲಿಯಲ್ಲಿ ವಾಸವಾಗಿದ್ದರು.
ರಾಧಾ ಗಾಯತ್ರಿ ತಮ್ಮ ಪತಿ ಸೌಮ್ಯ ಶ್ರೀಚರಣ್ ಜೊತೆ ಮಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಶ್ರೀಚರಣ್ ಕೂಡ ಐಟಿ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದು, ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ಜೂನ್ 14ರ ರಾತ್ರಿ ದಂಪತಿ ಮಸೂರಿಯ ಟಿಪ್ರಿಧಾರ್ ಪ್ರದೇಶದಲ್ಲಿರುವ ಕಿಯಾನಾ ಹೋಂಸ್ಟೇಗೆ ಆಗಮಿಸಿದ್ದರು.
‘ಬ್ಲಿಸ್’ ಎಂಬ ಕೊಠಡಿಯಲ್ಲಿ ತಂಗಿದ್ದ ದಂಪತಿ ರಾತ್ರಿ ಮದ್ಯ ಸೇವಿಸಿದ್ದರು ಎಂದು ತಿಳಿದುಬಂದಿದೆ. ಬಳಿಕ ಇಬ್ಬರೂ ನಿದ್ರೆಗೆ ಜಾರಿದ್ದರು. ಬೆಳಗ್ಗೆ ಎದ್ದಾಗ ಶ್ರೀಚರಣ್ ರಾಧಾರನ್ನು ನಿದ್ರೆಯಿಂದ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ರಾಧಾ ಯಾವುದೇ ಪ್ರತಿಕ್ರಿಯೆ ನೀಡಿದೆ ನೆಲದ ಮೇಲೆ ಬಿದ್ದಿದ್ದಾರೆ. ಇದನ್ನೂ ಓದಿ: NEET Paper Leak| ಟೆಲಿಗ್ರಾಮ್ ಮೇಲೆ ಕ್ರಮ – ವಾಟ್ಸಪ್ ಮೇಲೆ ನಿಷೇಧ ಯಾಕಿಲ್ಲ?
ಬೆತ್ತಲೆಯಾಗಿ ನೆಲದ ಮೇಲೆ ಬಿದ್ದಿದ್ದ ರಾಧಾ ಅವರ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಕೊಠಡಿಯಲ್ಲಿ ಹಾಸಿಗೆಯ ಮೇಲೂ ರಕ್ತದ ಕಲೆಗಳು ಕಂಡುಬಂದಿವೆ. ಅಲ್ಲದೇ ಎರಡು ಖಾಲಿ ಮದ್ಯದ ಬಾಟಲಿಗಳು ಮತ್ತು ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ವೈದ್ಯಕೀಯ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಾಧಾ ಗಾಯತ್ರಿ ಮತ್ತು ಸೌಮ್ಯ ಶ್ರೀಚರಣ್ ಕಳೆದ ವರ್ಷ ನವೆಂಬರ್ 8ರಂದು ವಿವಾಹವಾಗಿದ್ದರು. ಇಬ್ಬರೂ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡೆಹ್ರಾಡೂನ್‌ನ ಕೊರೊನೇಷನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ನಿಖರ ಕಾರಣ ತಿಳಿಯಲು ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲು ಹಾಗೂ ಅದರ ವಿಡಿಯೋ ಚಿತ್ರೀಕರಣ ಮಾಡಲು ಪೊಲೀಸರು ಸೂಚಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪ್ರಸಾದದ ಗುಣಮಟ್ಟ ಸುಧಾರಿಸಲು ಮೈಸೂರಿನ ಸಂಸ್ಥೆ ಜೊತೆ ಟಿಟಿಡಿ ಒಪ್ಪಂದ
