ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Question Paper Leak) ಹಿನ್ನೆಲೆಯಲ್ಲಿ ಜೂನ್ 22 ವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್‌ನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಆದೇಶ ಹೊರಡಿಸಿದೆ. ಈ ನಿರ್ಧಾರದ ಜೊತೆ ಜೂನ್ 30ರ ವರೆಗೆ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು (Message Editing Feature) ನಿಷ್ಕ್ರಿಯಗೊಳಿಸಲಾಗಿದೆ.
ಜೂನ್ 21 ರಂದು ನೀಟ್ ಮರು ಪರೀಕ್ಷೆ ನಡೆಯಲಿದೆ. ಈ ಹಿಂದೆ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್‌ನಲ್ಲಿ(Telegram) ಹೆಚ್ಚು ವೈರಲ್ ಆಗಿದ್ದವು. ಅದನ್ನು ತಡೆಯಲು ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಕೇಂದ್ರ ಸರ್ಕಾರ ಟೆಲಿಗ್ರಾಮ್ ಮೇಲೆ ಕ್ರಮ ಕೈಗೊಂಡರೂ ವಾಟ್ಸಪ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ವಾಟ್ಸಪ್‌ಗಿಂತ(Whatsapp) ಟೆಲಿಗ್ರಾಮ್ ಭಿನ್ನ ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯ
ಟೆಲಿಗ್ರಾಂನಲ್ಲಿ ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ಅವುಗಳ ಜಾಗದಲ್ಲಿ ಹೊಸ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು. ಆದರೆ ಆ ಮೆಸೇಜ್‌ನ ಹಳೆಯ ಸಮಯ (Timestamp) ಹಾಗೇ ಇರುತ್ತದೆ. ವಂಚಕರು ಪರೀಕ್ಷೆ ಮುಗಿದ ನಂತರ ಅಸಲಿ ಪ್ರಶ್ನೆ ಪತ್ರಿಕೆಯನ್ನು ಹಳೆಯ ಮೆಸೇಜ್‌ಗೆ ಎಡಿಟ್ ಮಾಡಿ ಸೇರಿಸುತ್ತಿದ್ದರು. ಇದರಿಂದ ಪರೀಕ್ಷೆಗೂ ಮುನ್ನವೇ ಪೇಪರ್ ಲೀಕ್ ಆಗಿದೆ ಎಂಬ ಭ್ರಮೆ ಸೃಷ್ಟಿಸಿ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಲಾಗುತ್ತಿತ್ತು. ವಾಟ್ಸಪ್‌ನಲ್ಲಿ ಮೆಸೇಜ್ ಎಡಿಟ್ ಮಾಡಲು ಕೇವಲ 15 ನಿಮಿಷಗಳ ಕಾಲಾವಕಾಶ ಇರುವುದರಿಂದ ಅಲ್ಲಿ ಇಂತಹ ವಂಚನೆ ಸಾಧ್ಯವಿಲ್ಲ.

ಬೃಹತ್ ಚಾನೆಲ್‌ಗಳು
ವಾಟ್ಸಪ್ ಗ್ರೂಪ್‌ಗಳಲ್ಲಿ ಸದಸ್ಯರ ಸಂಖ್ಯೆಗೆ (ಗರಿಷ್ಠ 1,024 ಸದಸ್ಯರು) ಮಿತಿ ಇದೆ. ಆದರೆ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಲಕ್ಷಾಂತರ ಅಥವಾ ಕೋಟ್ಯಂತರ ಜನರನ್ನು ಒಂದೇ ಬಾರಿ ತಲುಪಬಹುದು. “PAPER LEAKED NEET”, “Private Mafia” ನಂತಹ ನಕಲಿ ಚಾನೆಲ್‌ಗಳು ಇಡೀ ದೇಶದಾದ್ಯಂತ ಲಕ್ಷಾಂತರ ಆತಂಕಗೊಂಡ ವಿದ್ಯಾರ್ಥಿಗಳನ್ನು ತಲುಪಲು ಟೆಲಿಗ್ರಾಂನ ಈ ‘ಅನ್‌ಲಿಮಿಟೆಡ್ ಬ್ರಾಡ್‌ಕಾಸ್ಟಿಂಗ್’ ವೈಶಿಷ್ಟ್ಯವೇ ಪ್ರಮುಖ ಕಾರಣವಾಗಿತ್ತು. ಇದನ್ನೂ ಓದಿ: ವಿದೇಶಿ ಬಳಕೆದಾರರಿಗೆ ದಿಢೀರ್ ನಿಷೇಧ ಹೇರಿದ ಅಮೆರಿಕ – ಆಂಥ್ರೋಪಿಕ್ ಫೇಬಲ್ 5 ಮತ್ತು ಮಿಥೋಸ್ 5 ಸೇವೆ ಸ್ಥಗಿತ!
ಅನಾಮಧೇಯತೆ
ವಾಟ್ಸಪ್ ಬಳಸಲು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಕಾಣಿಸುತ್ತದೆ, ಇದರಿಂದ ಅಪರಾಧಿಗಳನ್ನು ಪತ್ತೆ ಹಚ್ಚುವುದು ಸುಲಭ. ಆದರೆ ಟೆಲಿಗ್ರಾಂನಲ್ಲಿ ಫೋನ್ ನಂಬರ್ ಮರೆಮಾಚಿ ಕೇವಲ ಯೂಸರ್‌ನೇಮ್ (Username) ಮೂಲಕ ಚಾನೆಲ್ ನಡೆಸಬಹುದು. ಇದರಿಂದಾಗಿ ಅಂತರರಾಜ್ಯ ಸೈಬರ್ ವಂಚಕರು ತಮ್ಮ ಅಸಲಿ ಗುರುತನ್ನು ಮರೆಮಾಚಿ ಕಾನೂನು ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಟೆಲಿಗ್ರಾಂ ಅನ್ನು ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದ್ದರು.
ಸ್ವಯಂಚಾಲಿತ ಬೋಟ್‌ಗಳು
ಟೆಲಿಗ್ರಾಂನಲ್ಲಿ ದೊಡ್ಡ ಗಾತ್ರದ ಪಿಡಿಎಫ್ (PDF) ಮತ್ತು ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಜೊತೆಗೆ, ಇಲ್ಲಿರುವ ಆಟೋಮೇಟೆಡ್ ಬೋಟ್‌ಗಳು (Bots) ಹಣ ಪಡೆದು ಸ್ವಯಂಚಾಲಿತವಾಗಿ ನಕಲಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ನೆಟ್‌ವರ್ಕ್ ಹೊಂದಿದ್ದವು. ವಾಟ್ಸಪ್‌ನಲ್ಲಿ ಇಂತಹ ಮುಕ್ತ ಬೋಟ್ ನೆಟ್‌ವರ್ಕ್ ವ್ಯವಸ್ಥೆ ಇಲ್ಲದಿರುವುದು ವಂಚಕರಿಗೆ ಅಲ್ಲಿ ಮಿತಿ ಹೇರಿತು.
ಬಳಕೆದಾರರ ಸ್ವರೂಪ
ವಾಟ್ಸಪ್ ಅನ್ನು ಜನರು ವೈಯಕ್ತಿಕ ಹಾಗೂ ದೈನಂದಿನ ಸಂವಹನಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ. ಅದನ್ನು ಸಂಪೂರ್ಣ ಬ್ಲಾಕ್ ಮಾಡಿದರೆ ಸಾರ್ವಜನಿಕವಾಗಿ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಭಾರಿ ತೊಂದರೆಯಾಗುತ್ತದೆ. ಆದರೆ ಟೆಲಿಗ್ರಾಂ ಹೆಚ್ಚಾಗಿ ಇಂತಹ ಅನಾಮಧೇಯ ಸಮುದಾಯಗಳು, ಸ್ಟಡಿ ಗ್ರೂಪ್‌ಗಳು ಮತ್ತು ಫೈಲ್ ಶೇರಿಂಗ್‌ಗೆ ಬಳಕೆಯಾಗುತ್ತಿರುವುದರಿಂದ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಟೆಲಿಗ್ರಾಂ ಮೇಲೆ ಮಾತ್ರ ನಿಯಂತ್ರಿತ ಮತ್ತು ತಾತ್ಕಾಲಿಕ ನಿರ್ಬಂಧ ಹೇರುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಸರ್ಕಾರ ಈಗ ನಿರ್ಬಂಧ ಹೇರಿದೆ.
