ವಾಷಿಂಗ್ಟನ್: ತಂತ್ರಜ್ಞಾನ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆಂಥ್ರೋಪಿಕ್(Anthropic) ಕಂಪನಿಯ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಮಾದರಿಗಳಾದ ಫೇಬಲ್ 5(Fable 5) ಮತ್ತು ಮಿಥೋಸ್ 5(Mythos 5) ಬಳಕೆಯ ಮೇಲೆ ಅಮೆರಿಕ ಸರ್ಕಾರ ದಿಢೀರ್ ನಿಷೇಧ ಹೇರಿದೆ. ರಾಷ್ಟ್ರೀಯ ಭದ್ರತೆ ಮತ್ತು ತಂತ್ರಜ್ಞಾನ ದುರುಪಯೋಗದ ಕಾರಣ ನೀಡಿ ಟ್ರಂಪ್ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ಜೂನ್ 9 ರಂದು ಬಿಡುಗಡೆಯಾಗಿದ್ದ ಈ ಎರಡೂ ಮಾದರಿಗಳು, ಕೇವಲ ಮೂರೇ ದಿನಗಳಲ್ಲಿ ಅಮೆರಿಕದ ರಫ್ತು ನಿಯಂತ್ರಣ ನಿಷೇಧಕ್ಕೆ (Export Controls) ಒಳಗಾಗಿವೆ. ಸರ್ಕಾರದ ಕಟ್ಟುನಿಟ್ಟಿನ ನಿಯಮ ಪಾಲಿಸಲು ಮುಂದಾಗಿರುವ ಆಂಥ್ರೋಪಿಕ್ ಸಂಸ್ಥೆಯು ಇವೆರಡೂ ಮಾದರಿಗಳ ಸೇವೆಯನ್ನು ಜಾಗತಿಕವಾಗಿ ತಕ್ಷಣವೇ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಏನಿದು ಫೇಬಲ್ 5 ಮತ್ತು ಮಿಥೋಸ್ 5?
ಫೇಬಲ್ 5: ಇದನ್ನು ಸಾಮಾನ್ಯ ಜನರು ಮತ್ತು ಡೆವಲಪರ್‌ಗಳ ಬಳಕೆಗಾಗಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳೊಂದಿಗೆ (Classifiers) Claude API ಹಾಗೂ ಸಾರ್ವಜನಿಕ ಚಂದಾದಾರಿಕೆಗಳ ಮೂಲಕ ಮುಕ್ತವಾಗಿ ನೀಡಲಾಗಿತ್ತು.
ಮಿಥೋಸ್ 5: ಇದನ್ನು ಸೈಬರ್ ಭದ್ರತೆ ಮತ್ತು ಜೀವಶಾಸ್ತ್ರದ ಸುಧಾರಿತ ಸಂಶೋಧನೆಗಾಗಿ ಸುರಕ್ಷತಾ ನಿಯಮಗಳನ್ನು ಸಡಿಲಗೊಳಿಸಿ ಸಿದ್ಧಪಡಿಸಲಾಗಿತ್ತು. ಇದನ್ನು ಕೇವಲ ಅನುಮೋದಿತ ಸರ್ಕಾರಿ ಮತ್ತು ಉದ್ಯಮ ಪಾಲುದಾರರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.
ಸಾಮರ್ಥ್ಯ ಹೇಗಿತ್ತು?
ಇವು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕೆಲಸಗಳಲ್ಲಿ ಅತ್ಯಂತ ವೇಗವಾಗಿದ್ದವು. ಪ್ರಸಿದ್ಧ ಸ್ಟ್ರೈಪ್ ಸಂಸ್ಥೆಯು ಇದರ ಸಹಾಯದಿಂದ ಬರೋಬ್ಬರಿ 5 ಕೋಟಿ ಲೈನ್ ಕೋಡಿಂಗ್ ಅನ್ನು ಕೇವಲ ಒಂದೇ ದಿನದಲ್ಲಿ ಬದಲಾಯಿಸಿತ್ತು.
ಚಾರ್ಟ್‌ಗಳು, ಸಂಕೀರ್ಣ ಡಾಕ್ಯುಮೆಂಟ್‌ಗಳು ಮತ್ತು ಕಠಿಣ ಚಿತ್ರಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳುತ್ತಿದ್ದವು. ಯಾವುದೇ ಮ್ಯಾಪ್ ಸಹಾಯವಿಲ್ಲದೆ ಕೇವಲ ಪರದೆಯನ್ನು ನೋಡಿ ಪೋಕ್ಮನ್ ಆಟವನ್ನು ಸಂಪೂರ್ಣವಾಗಿ ಆಡುವ ಸಾಮರ್ಥ್ಯ ಇವುಗಳಿಗಿತ್ತು. ಮಿಥೋಸ್ 5 ಮಾದರಿಯು ಔಷಧ ಸಂಶೋಧನೆ ಮತ್ತು ಜೀವಶಾಸ್ತ್ರದ ಅತ್ಯಂತ ಕಠಿಣ ಲೆಕ್ಕಾಚಾರಗಳನ್ನು ಸುಲಭವಾಗಿ ಬಿಡಿಸುವ ಶಕ್ತಿ ಹೊಂದಿತ್ತು.
The US government, citing national security authorities, has issued an export control directive to suspend all access to Fable 5 and Mythos 5 by any foreign national, whether inside or outside the United States, including foreign national Anthropic employees.
The net effect of…
— Anthropic (@AnthropicAI) June 13, 2026
ನಿಷೇಧಿಸಿದ್ದು ಯಾಕೆ?
ಸೈಬರ್ ದಾಳಿಯ ಭಯ ಫೇಬಲ್ 5 ಮಾದರಿಯಲ್ಲಿರುವ ಸುರಕ್ಷತಾ ನಿಯಮಗಳನ್ನು ಬೈಪಾಸ್ ಮಾಡುವ (ಹ್ಯಾಕ್ ಮಾಡುವ) ಹೊಸ ವಿಧಾನ ಪತ್ತೆಯಾಗಿದೆ ಎಂದು ಅಮೆರಿಕ ಸರ್ಕಾರ ನಂಬಿದೆ. ಈ ಜೈಲ್‌ಬ್ರೇಕ್ ವಿಧಾನವನ್ನು ಬಳಸಿ ಸೈಬರ್ ಅಪರಾಧಿಗಳು ಅಥವಾ ಶತ್ರು ದೇಶಗಳು ಸಾಫ್ಟ್‌ವೇರ್‌ಗಳಲ್ಲಿನ ದೋಷಗಳನ್ನು ಪತ್ತೆಹಚ್ಚಿ ದೊಡ್ಡ ಮಟ್ಟದ ಹ್ಯಾಕಿಂಗ್ ದಾಳಿ ನಡೆಸಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು.
ಜೈವಿಕ ಅಸ್ತ್ರಗಳ ಭೀತಿ: ಮಿಥೋಸ್ 5 ಮಾದರಿಯು ಅತ್ಯಂತ ಶಕ್ತಿಶಾಲಿ ಜೈವಿಕ ಜ್ಞಾನವನ್ನು ಹೊಂದಿತ್ತು. ಇದು ತಪ್ಪಾದ ಜನರ ಕೈ ಸೇರಿದರೆ ಅಪಾಯಕಾರಿ ವೈರಸ್‌ಗಳನ್ನು ಸೃಷ್ಟಿಸಲು ಅಥವಾ ಜೈವಿಕ ಆಯುಧಗಳನ್ನು (Biological Weapons) ತಯಾರಿಸಲು ಬಳಕೆಯಾಗಬಹುದು ಎಂಬ ಕಳವಳವಿತ್ತು. ಬ್ಯಾಂಕಿಂಗ್ ವ್ಯವಸ್ಥೆ ಅಥವಾ ವಿದ್ಯುತ್ ಗ್ರಿಡ್‌ಗಳಂತಹ ದೇಶದ ಪ್ರಮುಖ ಮೂಲಸೌಕರ್ಯಗಳನ್ನು ಹಾನಿಗೊಳಿಸಲು ಇದನ್ನು ಬಳಸಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಇದನ್ನೂ ಓದಿ: ಮಡುರೋ ಕಿಡ್ನಾಪ್ ಕೇಸ್‌ನಲ್ಲಿ ಸುದ್ದಿಯಾದ AI Anthropic ಕಂಪನಿಯ ಬೆಂಗಳೂರು ಕಚೇರಿ ಓಪನ್
ತಂತ್ರಜ್ಞಾನದ ಕಳ್ಳತನ: ಚೀನಾದಂತಹ ದೇಶಗಳು ಆಂಥ್ರೋಪಿಕ್ ಸಂಸ್ಥೆಯ ಈ ಅತ್ಯಾಧುನಿಕ ಮಾದರಿಗಳನ್ನು ಬಳಸಿ, ಅವುಗಳ ಸಾಮರ್ಥ್ಯವನ್ನು ಕದ್ದು ತಮ್ಮದೇ ಆದ ಪ್ರತ್ಯೇಕ ಶಕ್ತಿಶಾಲಿ AI ಮಾದರಿಗಳನ್ನು ತಯಾರಿಸಲು ಪ್ರಯತ್ನಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು.

ಮಿಲಿಟರಿ ಬಳಕೆಗೆ ವಿರೋಧ: ಈ ವರ್ಷದ ಆರಂಭದಲ್ಲಿ ಅಮೆರಿಕ ಮಿಲಿಟರಿ ತನ್ನ ಡ್ರೋನ್ ಮತ್ತು ಸ್ವಯಂಚಾಲಿತ ಆಯುಧಗಳ ದಾಳಿಗೆ ಕ್ಲೋಡ್ AI ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬಯಸಿತ್ತು. ಆದರೆ ಆಂಥ್ರೋಪಿಕ್ ಸಂಸ್ಥೆಯು ಇದಕ್ಕೆ ಒಪ್ಪದೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿತ್ತು. ಇದರಿಂದಾಗಿ ಟ್ರಂಪ್ ಸರ್ಕಾರವು ಆಂಥ್ರೋಪಿಕ್ ಸಂಸ್ಥೆಯನ್ನು ಮುಂಚೆಯೇ ಸರಬರಾಜು ಸರಪಳಿ ಅಪಾಯ (Supply Chain Risk) ಎಂದು ಘೋಷಿಸಿತ್ತು.
ಸ್ಥಗಿತಗೊಳಿಸಿದ್ದು ಏಕೆ?
ಅಮೆರಿಕ ಸರ್ಕಾರದ ರಫ್ತು ನಿಯಂತ್ರಣ ಆದೇಶವು ಕೇವಲ ವಿದೇಶಿ ಪ್ರಜೆಗಳು (ಅಮೆರಿಕದ ಒಳಗಿರುವ ಅಥವಾ ಹೊರಗಿರುವವರು) ಈ ಮಾದರಿಗಳನ್ನು ಬಳಸಬಾರದು ಎಂದು ಹೇಳಿತ್ತು. ಆದರೆ ಆಂಥ್ರೋಪಿಕ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಮುಂಚೂಣಿ ವಿಜ್ಞಾನಿಗಳು ಮತ್ತು ಜಾಗತಿಕ ಗ್ರಾಹಕರು ವಿದೇಶಿಯರಾಗಿದ್ದಾರೆ. ಹೀಗಾಗಿ ಗೊಂದಲ ಮತ್ತು ಸರ್ಕಾರ ನಿಯಮ ಉಲ್ಲಂಘನೆಯನ್ನು ಸಂಪೂರ್ಣವಾಗಿ ತಪ್ಪಿಸಲು ಸಂಸ್ಥೆಯು ಇಡೀ ಮಾದರಿಯನ್ನೇ ಜಾಗತಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿತು.
ಸದ್ಯಕ್ಕೆ ಫೇಬಲ್ 5 ಮತ್ತು ಮಿಥೋಸ್ 5 ಸೇವೆಗಳು ರದ್ದಾಗಿದ್ದರೂ, ಕ್ಲೋಡ್‌ನ ಹಳೆಯ ಮಾದರಿಗಳಾದ Claude Opus, Sonnet ಇತ್ಯಾದಿ ಸೇವೆಗಳು ಎಂದಿನಂತೆ ಲಭ್ಯವಿವೆ.
ಭಾರತಕ್ಕೆ ಏನು?
ಅಮೆರಿಕ ಸರ್ಕಾರದ ಈ ಕಠಿಣ ರಫ್ತು ನಿಯಂತ್ರಣ ನೀತಿಯಿಂದಾಗಿ, ಇಂತಹ ಅತ್ಯಾಧುನಿಕ AI ತಂತ್ರಜ್ಞಾನಗಳು ಕೇವಲ ಅಮೆರಿಕದ ನಾಗರಿಕರು ಅಥವಾ ಅಲ್ಲಿನ ಆಯ್ದ ಉದ್ಯಮಗಳಿಗೆ ಮಾತ್ರ ಸೀಮಿತವಾಗುವ ಅಪಾಯವಿದೆ. ಇದು ಭಾರತದಂತಹ ಮುನ್ನಡೆಯುತ್ತಿರುವ ದೇಶಗಳ ಐಟಿ ಉದ್ಯಮಕ್ಕೆ ಮತ್ತು ಜಾಗತಿಕ ಸ್ಪರ್ಧೆಗೆ ತೀವ್ರ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
