DistrictsKarnatakaKodaguLatestMain Post

ಅಕ್ಕ-ಪಕ್ಕದಲ್ಲಿ ಓಮಿಕ್ರಾನ್ ಹಾವಳಿ ಇದ್ದರೂ ಕೊಡಗಿನಲ್ಲಿ ಪ್ರವಾಸಿಗರದ್ದೇ ದರ್ಬಾರ್

ಮಡಿಕೇರಿ: ರಾಜ್ಯದ ಬಹುತೇಕ ಕಡೆಗಳಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದೆಡೆ ಪಕ್ಕದ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್ ಮಗದೊಂದೆಡೆ ಪಕ್ಕದ ರಾಜ್ಯ ಕೇರಳದಲ್ಲೂ ಓಮಿಕ್ರಾನ್ ಪತ್ತೆಯಾಗುತ್ತಿದೆ. ಆದರೆ ಪ್ರವಾಸಿಗರು ಮಾತ್ರ ಎಲ್ಲವನ್ನೂ ಮರೆತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ.

ಎರಡು ಗಡಿಭಾಗದಲ್ಲಿ ಓಮಿಕ್ರಾನ್ ಪತ್ತೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗಡಿಭಾಗದಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸುವಂತೆಯೂ ಸೂಚಿಸಿದೆ. ಆದರೆ ಈ ಮಾರ್ಗಸೂಚಿಗಳನ್ನು ಪ್ರವಾಸಿಗರು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಗೆ ಪ್ರವಾಸಿಗರಿಂದ ಕೊರೊನಾ ಕಂಟಕ ಎದುರಾಗುತ್ತಾ ಅನ್ನೋ ಗಂಭೀರ ಭಯ ಕಾಡುತ್ತಿದೆ. ಇದನ್ನೂ ಓದಿ: 100 ಕೋಟಿ ರೂ. ಮೌಲ್ಯದ ಒತ್ತುವರಿ ತೆರವು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ!

ಹೌದು, ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಗೆ ಮತ್ತೆ ಕಂಟಕ ಎದುರಾಗುತ್ತಾ ಎನ್ನುವ ಆತಂಕ ಶುರುವಾಗಿದೆ. ಸಾಮಾನ್ಯವಾಗಿ ಜಿಲ್ಲೆಗೆ ವಾರದ ಅಂತ್ಯ ಬಂದ್ರೆ ಸಾಕು ಪ್ರವಾಸಿಗಳು ಕೊಡಗಿನ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ.

ರಾಜ್ಯ, ಅಂತರರಾಜ್ಯ ಪ್ರವಾಸಿಗರು ಜಿಲ್ಲೆಯ ನಿಸರ್ಗಧಾಮ, ದುಬಾರೆ, ಮಡಿಕೇರಿಯ ರಾಜಾಸೀಟ್ ಅಬ್ಬಿಜಲಪಾತ ಹೀಗೆ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಆದರೆ ಈ ವೇಳೆ ಪ್ರವಾಸಿಗರು ಯಾವುದೇ ಪ್ರವಾಸಿ ತಾಣಗಳಲ್ಲಿ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಅಷ್ಟೇ ಅಲ್ಲ ಮಾಸ್ಕ್ ಬಳಕೆ ಮಾಡುವುದನ್ನು ಸಂಪೂರ್ಣ ಮರೆತಿದ್ದಾರೆ. ಇದನ್ನೂ ಓದಿ: 36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ

ಇದರಿಂದಾಗಿ ಮತ್ತೆ ಕೊಡಗಿನಲ್ಲಿ ಕೋವಿಡ್ ಸ್ಫೋಟವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಡಿಕೇರಿ ಸಮೀಪ ಇರುವ ಪ್ರವಾಸಿ ತಾಣ ಅಬ್ಬಿಫಾಲ್ಸ್ ನಲ್ಲಿ ಜನಜಂಗುಳಿ ಹೆಚ್ಚಾಗಿಯೇ ಕಂಡುಬರುತ್ತಿದೆ. ಪ್ರವಾಸಕ್ಕೆ ಬಂದ ಪ್ರವಾಸಿಗರು ಕೋವಿಡ್ ನಿಯಮವನ್ನು ಸಂಪೂರ್ಣ ಉಲ್ಲಂಘನೆ ಮಾಡುತ್ತಿದ್ದಾರೆ. ಮಾಸ್ಕೂ ಇಲ್ಲ, ಸಾಮಾಜಿಕ ಅಂತರವೂ ಇಲ್ಲ ಅಷ್ಟೇ ಅಲ್ಲದೇ ಇತ್ತ ಪ್ರವಾಸಿ ತಾಣಗಳಲ್ಲಿ ಯಾವುದೇ ತಪಾಸಣೆಯೂ ಇಲ್ಲ. ಒಂದು ವೇಳೆ ಸ್ಥಿತಿ ಹೀಗೆ ಮುಂದುವರಿದರೆ ಇದು ಮೂರನೇ ಅಲೆಗೆ ಮುನ್ನುಡಿ ಬರೆದರೂ ಅಚ್ಚರಿಯಿಲ್ಲ ಎನ್ನೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

Leave a Reply

Your email address will not be published.

Back to top button