BelgaumBellaryDistrictsKarnatakaLatestMain Post

ಸಂಡೂರು ತಹಶೀಲ್ದಾರ್ ರಶ್ಮಿ Vs ತುಕಾರಾಮ್ – ಏನಿದು ಕಿರಿಕ್? ವಿವಾದಕ್ಕೆ ಕಾರಣ ಏನು?

Advertisements

– ಯಾವುದೇ ಸ್ಥಾನ ತೋರಿಸದೆ ತಹಶೀಲ್ದಾರ್ ರಶ್ಮಿ ವರ್ಗಾವಣೆ

ಬೆಳಗಾವಿ: ಕಾಂಗ್ರೆಸ್ ಶಾಸಕ ತುಕಾರಾಮ್ ಅವರಿಗೆ ಸಂಡೂರು ತಾಲೂಕಿನ ತಹಶೀಲ್ದಾರ್ ಹೆಚ್.ಜಿ. ರಶ್ಮಿ ಅವಮಾನ ಮಾಡಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ನಂತರ ಸರ್ಕಾರ ಯಾವುದೇ ಸ್ಥಾನ ತೋರಿಸದೆ ರಿಲೀವ್ ಮಾಡಿದೆ ಎಂದು ಸ್ಪಷ್ಟಪಡಿಸಿದೆ.

ತುಕಾರಾಮ್ ಅಸಮಾಧಾನಕ್ಕೆ ಕಾರಣ ಏನು?
ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಶಾಸಕರು ಗೈರಾಗಿದ್ದರು. ಧ್ವಜಾರೋಹಣಕ್ಕೆ ಶಾಸಕರಿಗೆ ಮನೆಗೆ ಬಂದು ಆಹ್ವಾನ ನೀಡಿಲ್ಲ ಎನ್ನುವ ಕಾರಣಕ್ಕೆ ತುಕಾರಾಮ್ ಅಸಮಾಧಾನದಿಂದ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ತುಕಾರಾಮ್ ಅನುಪಸ್ಥಿತಿಯಲ್ಲಿ ರಶ್ಮಿ ಧ್ವಜಾರೋಹಣ ಮಾಡಿದ್ದರು. ಈ ಹಿಂದೆ ಯಡಿಯೂರಪ್ಪ ಸಿಎಂ ಇರುವಾಗಲೇ ರಶ್ಮಿ ವರ್ಗಾವಣೆ ಮಾಡುವಂತೆ ತುಕಾರಾಮ್ ಪಟ್ಟು ಹಿಡಿದಿದ್ದರು. ಈ ಬಗ್ಗೆ ತುಕಾರಾಮ್ ಯಡಿಯೂರಪ್ಪಗೆ ಪತ್ರ ಕೂಡ ಬರೆದಿದ್ದರು. ಇದೀಗ ಈ ಪತ್ರ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಂಡೂರು ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು – ಸದನದ ಬಾವಿಗಿಳಿದು ಧರಣಿ

ತುಕಾರಾಮ್ ಬೆಳಗಾವಿ ಅಧಿವೇಶನದಲ್ಲಿ ತಹಶೀಲ್ದಾರ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿದರು. ತಹಶೀಲ್ದಾರ್ ಕಾಲೇಜಿನಲ್ಲಿ ಪಾರ್ಟಿ ಮಾಡುತ್ತಾರೆ. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ. ಹಳ್ಳಿಗಳಲ್ಲಿ ತಹಶೀಲ್ದಾರರು ಕೋಲು ಹಿಡಿದು ಗೂಂಡಾ ವರ್ತನೆ ಮಾಡುತ್ತಿದ್ದಾರೆ. ವಾಲ್ಮೀಕಿ ಜಯಂತಿ ದಿನ ಕಾರ್ಯಕ್ರಮದಲ್ಲಿ ನನ್ನ ಹೆಸರು ಆಹ್ವಾನ ಪತ್ರದಲ್ಲಿ ಹಾಕಿಲ್ಲ. ಈ ಮೂಲಕ ಅವಮಾನ ಮಾಡಿದ್ದಾರೆ ಎಂದು ತುಕಾರಾಮ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ರು. ಅಲ್ಲದೆ ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು. ಇದನ್ನೂ ಓದಿ: ಆ ಒಂದು ಸಾಫ್ಟ್‌ವೇರ್ ಒಂದು ತಿಂಗಳು ‘ಇ-ಸ್ವತ್ತು’ಗೆ ಕೈಕೊಡ್ತು!

ಇದಕ್ಕೆ ಧ್ವನಿ ಗೂಡಿಸಿದ ಕಾಂಗ್ರೆಸ್ ಶಾಸಕರು, ತಹಶೀಲ್ದಾರರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ತುಕಾರಾಮ್ ಪತ್ರದ ಮೇಲೆ ಕ್ರಮ ಕೈಗೊಳ್ಳಲು ಮಾಧುಸ್ವಾಮಿ ಸೂಚಿಸಿದ್ದಾರೆ. ಇದಾದ ಮೇಲೂ ಶಾಸಕರಿಗೆ ತಹಶೀಲ್ದಾರರು ಅವಮಾನ ಮಾಡುವುದು ನಿಂತಿಲ್ಲ. ಸಿಎಂ ಆದೇಶ ಇದ್ದರೂ ಇಲಾಖೆ ಅಧಿಕಾರಿಗಳು ತಹಶೀಲ್ದಾರರನ್ನು ವರ್ಗಾವಣೆ ಮಾಡಿಲ್ಲ. ಈ ವಿಚಾರವಾಗಿ ತೇಲಿಸುವ ಉತ್ತರ ಕೊಡಬಾರದು. ಅಧಿಕಾರಿಗಳು ನಿಮ್ಮ ಜಿಲ್ಲೆಯಲ್ಲಿ ಹೀಗೆ ಮಾತನಾಡಿದರೆ ಸುಮ್ಮನಿರುತ್ತಾರಾ ಎಂದು ಪ್ರಶ್ನಿಸಿದರು.

ತಹಶೀಲ್ದಾರ್ ರಿಲೀವ್:
ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್ ಹತ್ತು ನಿಮಿಷಗಳ ಕಾಲ ಮುಂದೂಡಿ ಸಂಧಾನ ನಡೆಸಿದರು. ಮತ್ತೆ ಪುನಃ ಸದನ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲೇ ನಿಂತು ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಈಗಾಗಲೇ ಕರೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ರಿಲೀವ್ ಮಾಡಿದ್ದೇವೆ. ಅವರಿಗೆ ಯಾವುದೇ ಸ್ಥಾನ ತೋರಿಸಲ್ಲ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುತ್ತೇವೆ ಎಂದರು. ಬಳಿಕ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ವಾಪಸ್ ತೆಗೆದುಕೊಂಡರು. ಇದನ್ನೂ ಓದಿ: ಕಲಾಪಕ್ಕೆ ಅಡ್ಡಿ- ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು‌

Leave a Reply

Your email address will not be published.

Back to top button