ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶೂನ್ಯ ವೆಚ್ಚದಲ್ಲಿ ರಾಜ್ಯದ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ. ಬೆಂಗಳೂರು (Bengaluru) ನಗರದ ಪುಟ್ಟೇನಹಳ್ಳಿ – ಸಹಕಾರನಗರ 220 ಕೆವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ‘ಡೈನಾಮಿಕ್ ಲೈನ್ ರೇಟಿಂಗ್’ (DLR) ಪ್ರಾಯೋಗಿಕ ಯೋಜನೆ ಆಳವಡಿಕೆಯನ್ನು ಆರಂಭಿಸಿದೆ.
ಈ ಯೋಜನೆಯ ಅನುಷ್ಠಾನಕ್ಕೆ ಕಾರ್ಯಾದೇಶ ಪತ್ರವನ್ನು (LoI) ನೀಡಲಾಗಿದೆ. ಈ ಮೂಲಕ ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ರಾಜ್ಯ ವಿದ್ಯುತ್ ಪ್ರಸರಣ ನಿಗಮವಾಗಿ ಹೊರ ಹೊಮ್ಮಿದೆ.
ಹೊಸ ತಂತ್ರಜ್ಞಾನದ ಮೂಲಕ, ಯಾವುದೇ ಹೆಚ್ಚುವರಿ ಟವರ್‌ಗಳ ನಿರ್ಮಾಣ ಅಥವಾ ಹೊಸ ಭೂ ಸ್ವಾಧೀನದ ಅಗತ್ಯವಿಲ್ಲದೆ, ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಶೇಕಡಾ 25 ರಷ್ಟು ಹೆಚ್ಚಿಸುವ ಗುರಿಯನ್ನು ನಿಗಮ ಹೊಂದಿದೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಕ್ರೋಚ್ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ – ವಿಡಿಯೋ ವೈರಲ್
ಈ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ ಸಾಂಪ್ರದಾಯಿಕ ‘ಸ್ಟಾಟಿಕ್ ಲೈನ್ ರೇಟಿಂಗ್’ ವಿಧಾನದ ಬದಲಿಗೆ, ಐಒಟಿ (IoT) ಸಂವೇದಕಗಳನ್ನು ಬಳಸುತ್ತದೆ. ಈ ಸಂವೇದಕಗಳು ತಾಪಮಾನ, ಗಾಳಿಯ ವೇಗ, ಸೌರ ವಿಕಿರಣ ಮತ್ತು ವಿದ್ಯುತ್ ತಂತಿಯ ಸ್ಥಿತಿಗತಿಯನ್ನು (Conductor Sag) ನೈಜ ಸಮಯದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ. ಈ ದತ್ತಾಂಶವು, ಹವಾಮಾನ ಪರಿಸ್ಥಿತಿಗನುಗುಣವಾಗಿ ವಿದ್ಯುತ್ ಹರಿವನ್ನು ಹೆಚ್ಚಿಸಲು ಗ್ರಿಡ್ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ರಾಜ್ಯದಲ್ಲಿನ ನಗರೀಕರಣ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳ, ಡೇಟಾ ಸೆಂಟರ್‌ಗಳು ಮತ್ತು ಎಐ-ಚಾಲಿತ ಕೈಗಾರಿಕೆಗಳಿಂದ ವಿದ್ಯುತ್ ಬೇಡಿಕೆ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಿದೆ.
ಪುಟ್ಟೇನಹಳ್ಳಿ-ಸಹಕಾರನಗರ 220 KV ಲೈನ್ ಅನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಇಲ್ಲಿನ ಫಲಿತಾಂಶಗಳ ಆಧಾರದ ಮೇಲೆ ಕೆಪಿಟಿಸಿಎಲ್ ರಾಜ್ಯದ ಇತರ ಹೆಚ್ಚಿನ ಬೇಡಿಕೆ ಮತ್ತು ನವೀಕರಿಸಬಹುದಾದ ಇಂಧನ ಮಾರ್ಗಗಳಿಗೆ ಈ ತಂತ್ರಜ್ಞಾನವನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.
ಈ ಯೋಜನೆಯು ಕೆಪಿಟಿಸಿಎಲ್ ನ ದೀರ್ಘಕಾಲೀನ ಗ್ರಿಡ್ ಆಧುನೀಕರಣದ ಕಾರ್ಯತಂತ್ರದ ಭಾಗವಾಗಿದ್ದು, ಕರ್ನಾಟಕವನ್ನು ಸದೃಢ, ಡಿಜಿಟಲ್ ಸಿದ್ದ ಮತ್ತು ಸುಸ್ಥಿರ ವಿದ್ಯುತ್ ಜಾಲವನ್ನು ಹೊಂದಿರುವ ರಾಜ್ಯವನ್ನಾಗಿ ಮಾಡುವ ದೃಷ್ಟಿಯೊಂದಿಗೆ ರೂಪಿಸಲಾಗಿದೆ.
