ಬಾಲಿವುಡ್ (Bollywood) ನಟ ಸೈಫ್ ಅಲಿ ಖಾನ್(Saif Ali Khan) ಮೇಲೆ ನಡೆದ ಚಾಕು ಇರಿತ (Knife Attack) ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಘಟನೆ ನಡೆದ ಒಂದೂವರೆ ವರ್ಷದ ಬಳಿಕ, ಆ ರಾತ್ರಿ ನಡೆದ ಭಯಾನಕ ಕ್ಷಣಗಳ ಬಗ್ಗೆ ಸೈಫ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.
2025ರ ಜನವರಿ 16ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ನಡೆದಿತ್ತು. ತಡರಾತ್ರಿ ನಡೆದ ಈ ಘಟನೆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆನ್ನಿನಲ್ಲಿ ಸಿಲುಕಿದ್ದ ಚಾಕುವಿನ ತುಂಡನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದರು.
ಈ ಘಟನೆ ನಡೆದ ಒಂದೂವರೆ ವರ್ಷದ ಬಳಿಕ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೈಫ್ ಆ ದಿನದ ಘಟನೆಗಳನ್ನು ವಿವರಿಸಿದ್ದಾರೆ. ನಿರೂಪಕಿ ಬರ್ಖಾ ದತ್ ಜೊತೆ ಮಾತನಾಡಿದ ಅವರು, ಆ ರಾತ್ರಿ ಏನಾಯಿತು ಎಂಬುದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ನಾನು ಮಲಗಿದ್ದಾಗ ಮನೆಯ ಕೆಲಸದಾಕೆ ಓಡಿ ಬಂದು, ಕಿರಿಯ ಮಗ ಜೇಹ್ ಇರುವ ಕೋಣೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇದ್ದಾನೆ ಎಂದು ಹೇಳಿದಳು. ತಕ್ಷಣ ನಾನು ಅಲ್ಲಿಗೆ ಓಡಿದೆ. ಆಗ ಆತ ಕೆಲಸದಾಕೆಗೂ, ನನ್ನ ಮಗನಿಗೂ ಗಾಯಗೊಳಿಸಿದ್ದ. ಹಣ ಕೊಡದಿದ್ದರೆ ಮಗುವಿಗೆ ಚಾಕು ಚುಚ್ಚುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಸೈಫ್ ಹೇಳಿದ್ದಾರೆ.

ಕೂಡಲೇ ನಾನು ಆತನ ಮೇಲೆ ಎಗರಿದೆ. ಇಬ್ಬರ ನಡುವೆ ಕೆಲ ಹೊತ್ತು ಹೊಡೆದಾಟ ನಡೆಯಿತು. ಬಳಿಕ ಆತ ತಪ್ಪಿಸಿಕೊಂಡು ನನ್ನ ಹಿರಿಯ ಮಗ ತೈಮೂರ್ ಇದ್ದ ಕೋಣೆಯ ಕಡೆ ಹೋಗಲು ಯತ್ನಿಸಿದ. ನಾನು ತಡೆಯಲು ಹೋದಾಗ, ಆತ ನನ್ನ ಬೆನ್ನಿಗೆ ಚಾಕುವಿನಿಂದ ಇರಿದ. ಇದರಿಂದ ನನಗೆ ಹಲವು ಗಾಯಗಳಾದವು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸೂರ್ಯ ಅಭಿನಯದ ಸಿನಿಮಾಗೆ ಹೊಂಬಾಳೆ ನಿರ್ಮಾಣ
ಆ ವೇಳೆ ನಮ್ಮ ಮನೆಯ ಕೆಲಸದಾಕೆ ಧೈರ್ಯದಿಂದ ಆತನನ್ನು ತಳ್ಳಿ ಕೆಳಗೆ ಬೀಳಿಸಿದಳು. ಬಳಿಕ ಆತ ಅಲ್ಲಿಂದ ಓಡಿ ಹೋದ. ಆತ ಸ್ನಾನದ ಮನೆಯ ಕಿಟಕಿಯ ಮೂಲಕ ಮನೆಯೊಳಗೆ ಪ್ರವೇಶಿಸಿದ್ದ ಎಂದು ಸೈಫ್ ಹೇಳಿದ್ದಾರೆ.
ನಾನು ಬಿಳಿ ಪೈಜಾಮಾ ಧರಿಸಿದ್ದೆ. ರಕ್ತಸ್ರಾವದಿಂದ ನೆಲಕ್ಕೇ ಕುಸಿದುಬಿದ್ದೆ. ಆಗ ನನ್ನ ಹಿರಿಯ ಮಗ ತೈಮೂರ್ ಬಂದು, ಅಪ್ಪಾ… ನೀವು ಸಾಯುತ್ತಿದ್ದೀರಾ? ಎಂದು ಕೇಳಿದ. ನಾನು, ಇಲ್ಲ… ನನಗೆ ಏನೂ ಆಗುವುದಿಲ್ಲ. ಆಸ್ಪತ್ರೆಗೆ ಹೋಗೋಣ ಎಂದು ಹೇಳಿದೆ. ಬಳಿಕ ಮಗನ ಸಹಾಯದಿಂದ ಆಸ್ಪತ್ರೆಗೆ ತೆರಳಿದೆವು,” ಎಂದು ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ, ನನ್ನನ್ನು ಕೊಲ್ಲಲು ಪ್ರಯತ್ನಿಸಿದ ಆ ವ್ಯಕ್ತಿಯನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಸೈಫ್ ಅಲಿ ಖಾನ್ ಭಾವುಕರಾಗಿ ಹೇಳಿದ್ದಾರೆ. ಸೈಫ್ ಮೇಲಿನ ದಾಳಿ ನಡೆದ ಮೂರು ದಿನಗಳಲ್ಲೇ, ಬಾಂಗ್ಲಾದೇಶ ಮೂಲದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ದರ್ಶನ್ ನೆನೆದು `ಹೇಗಾದರೂ ಮಾತಾಡು ನೀ’ ಎಂದ ವಿಜಯಲಕ್ಷ್ಮಿ
