ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ 14ನೇ ಆರೋಪಿ ಪ್ರದೋಷ್ (Pradosh) ಹೇಳಿಕೆಯನ್ನು ಒಂದು ವಾರಗಳ ಕಾಲ ದಾಖಲಿಸದಂತೆ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ಪ್ರದೋಷ್ ಹೇಳಿಕೆ ದಾಖಲು ಮಾಡದಂತೆ ಕೋರ್ಟ್‌ನಲ್ಲಿ ದರ್ಶನ್ (Darshan) ಪರ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ (Court) ಇಂದು ವಿಚಾರಣೆ ನಡೆಸಿತು. ಈ ವೇಳೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಅದೇಶ ಎತ್ತಿಹಿಡಿದರೆ ಪ್ರಕ್ರಿಯೆ ಮುಂದುವರೆಸಬಹುದು. ತಕ್ಷಣಕ್ಕೆ ಪ್ರದೂಷ್ ಹೇಳಿಕೆ ದಾಖಲಿಸಬಾರದು ಎಂದು ಪ್ರಬಲವಾಗಿ ವಾದಿಸಿದರು. ಇದಕ್ಕೆ ಪ್ರದೋಷ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಕೋರ್ಟ್ ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿ, ಆಗಸ್ಟ್ 18ರವರೆಗೆ ಪ್ರದೋಶ್ ಹೇಳಿಕೆ ದಾಖಲು ಮಾಡದಂತೆ ಸೂಚಿಸಿದೆ. ಹೀಗಾಗಿ ದರ್ಶನ್‌ಗೆ ಒಂದು ವಾರಗಳ ಕಾಲ ರಿಲೀಫ್ ಸಿಕ್ಕಂತಾಗಿದೆ. ಇದನ್ನೂ ಓದಿ: ದರ್ಶನ್‌ಗೆ ಮಾಫಿ ಸಾಕ್ಷಿ ಕಂಟಕ – ಹೇಳಿಕೆ ತಪ್ಪಿಸಲು ಹೈಕೋರ್ಟ್ ಮೆಟ್ಟಿಲೇರಲು ಪ್ಲಾನ್!
ಜೈಲಿನಲ್ಲಿ ಪ್ರದೂಷ್ ಭದ್ರತೆ ನೀಡಿ
ಇಂದು ವಿಚಾರಣೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ದರ್ಶನ್, ಪವಿತ್ರಾಗೌಡ ಹಾಗೂ ಪ್ರದೂಷ್ ಹಾಜರಾಗಿದ್ದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಪ್ರದೂಷ್ ಪರ ವಕೀಲ ದಿವಾಕರ್, ನನ್ನ ಕಕ್ಷಿದಾರರು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್ ಸಹ ಸಮ್ಮತಿಸಿದೆ. ಕೂಡಲೇ ಅವರ ಹೇಳಿಕೆ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಪ್ರದೋಷ್‌ಗೆ ಜೈಲಿನಲ್ಲಿ ಜೀವಭಯ ಇದೆ ಹೀಗಾಗಿ ಪ್ರತ್ಯೇಕ ಸೆಲ್‌ನಲ್ಲಿಡುವಂತೆ ಮನವಿ ಮಾಡಿದರು. ವಕೀಲರ ಮನವಿ ಪುರಸ್ಕರಿಸಿದ ಕೋರ್ಟ್ ಪ್ರದೋಷ್‌ಗೆ ಜೈಲಿನಲ್ಲಿ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿದೆ. ಅಲ್ಲದೇ ಪ್ರತ್ಯೇಕವಾಗಿ ವಿಡಿಯೋ ಕಾನ್ಫರೆನ್ಸ್ ಬರುವಂತೆ ಸೂಚಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಭಾರೀ ಹಿನ್ನಡೆ| ಪ್ರದೋಷ್ ಇನ್ನು ಮುಂದೆ ಮಾಫಿ ಸಾಕ್ಷಿ – ಕೋರ್ಟ್ ಒಪ್ಪಿಗೆ

