ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್‌ನನ್ನು(Pradosh) ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ.
ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಪ್ರದೋಷ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಮಹತ್ವದ ಆದೇಶ ಪ್ರಕಟಿಸಿದೆ.
ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸ್ವೀಕರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು. ಆದರೆ ದರ್ಶನ್ (Darashan) ಪರ ವಕೀಲ ಹಷ್ಮತ್ ಪಾಷಾ ಅವರು ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ನ್ಯಾಯಾಲಯವೇ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿದ್ದು ದರ್ಶನ್‌ಗೆ ಹಿನ್ನಡೆಯಾಗಿದೆ.
ಕೋರ್ಟ್ ಮಾಫಿ ಅರ್ಜಿಯನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಿರುವುದರಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮುಂದೆ ಹೊಸ ಬೆಳವಣಿಗೆಗಳು ಎದುರಾಗಬಹುದು. ಇದು ದರ್ಶನ್ ಪರ ವಾದದ ಮೇಲೂ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ರೇಣುಕಾಸ್ವಾಮಿ ಒಳ ಉಡುಪನ್ನು ತೆಗೆದು ದರ್ಶನ್ ಹೊಡೆದಿದ್ದರು – ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ಪ್ರದೋಷ್ ಪಾತ್ರವೇನು?
ಗಿರಿನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಪ್ರದೋಷ್, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಅವರ ಹತ್ತಿರದ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ ಭಾರಿ ಮೊತ್ತದ ವೇತನ ಪಡೆಯುತ್ತಿದ್ದರೂ ಆತನಿಗೆ ಅಭಿನಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿತ್ತು.
ಸಿನಿಮಾಗಳಲ್ಲಿ ನಟಿಸುವ ಈ ಆಸಕ್ತಿಯೇ ಆತನನ್ನು ದರ್ಶನ್ ಸಂಪರ್ಕಕ್ಕೆ ತಂದಿತ್ತು. ಐಟಿ ಕೆಲಸದ ಜೊತೆಗೆ ದರ್ಶನ್ ಅಭಿನಯದ ‘ಬೃಂದಾವನ’ ಹಾಗೂ ‘ಬುಲ್‌ಬುಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರದೋಶ್ ಅಭಿನಯಿಸಿದ್ದ. ಇದನ್ನೂ ಓದಿ: ಬೇಡ ಸರ್, ಹೊಡೆಯುವುದು ಬಿಡಿ ಎಂದರೂ ಹೊಡೆದರು; ಸಿಗರೇಟ್‌ನಿಂದ ಸುಟ್ಟರು – ದರ್ಶನ್ ಬಗ್ಗೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿದ್ದೇನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಪಾತ್ರ ವಹಿಸಿದ್ದು, ಕೃತ್ಯದ ನಂತರ ದರ್ಶನ್ ಪಾರು ಮಾಡಲು ತೀವ್ರ ಯತ್ನ ನಡೆಸಿದ್ದ. ಈ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬಾರದಂತೆ ನೋಡಿಕೊಳ್ಳಲು ದರ್ಶನ್, ಪ್ರದೋಶ್‌ಗೆ 30 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರದೋಶ್ ನಿವಾಸದಲ್ಲಿದ್ದ ಈ 30 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅಧಿಕೃತ ಮಾಹಿತಿ ಸಲ್ಲಿಸಿದ್ದಾರೆ.

