ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ದಿನಕ್ಕೊಂದು ಆಘಾತಕಾರಿ ತಿರುವು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್(Pradosh) ಕೋರ್ಟ್‌ಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿ ದರ್ಶನ್ (Darshan) ಹಾಗೂ ತಂಡ ನಡೆಸಿದ ಹತ್ಯಾಕಾಂಡದ ಇಂಚಿಂಚೂ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.
ತನ್ನ ಅರ್ಜಿಯಲ್ಲಿ ಪ್ರದೋಷ್, “ನನ್ನದೇನೂ ತಪ್ಪಿಲ್ಲ, ನಾನು ತಡೆಯಲು ಯತ್ನಿಸಿದರೂ ದರ್ಶನ್ ಮತ್ತು ತಂಡ ಕೇಳಲಿಲ್ಲ” ಎಂದು ಹೇಳಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಪೋಟಕ ಸಂಗತಿಗಳನ್ನು ತೆರೆದಿಟ್ಟಿದ್ದಾನೆ.
ಪ್ರದೋಷ್ ಅರ್ಜಿಯಲ್ಲಿ ಏನಿದು?
ರೇಣುಕಾಸ್ವಾಮಿ ಮೇಲೆ ದರ್ಶನ್ ಮತ್ತು ಅವರ ಗ್ಯಾಂಗ್ ಅಮಾನುಷವಾಗಿ ಹಲ್ಲೆ ನಡೆಸಿದೆ. “ಬೇಡ ಸರ್, ಹೊಡೆಯುವುದು ಬಿಡಿ” ಎಂದು ನಾನು ಎಷ್ಟೇ ಮನವಿ ಮಾಡಿದರೂ ಯಾರೂ ನನ್ನ ಮಾತು ಕೇಳಲಿಲ್ಲ. ರೇಣುಕಾಸ್ವಾಮಿಗೆ ಸಿಗರೇಟ್‌ನಿಂದ ಸುಟ್ಟು ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಲಾಯಿತು. ದರ್ಶನ್ ಸ್ವತಃ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಮೊಬೈಲ್ ಪರಿಶೀಲಿಸಿದಾಗ, ಆತ ಪವಿತ್ರಾ ಗೌಡಗೆ (Pavithra Gowda) ಮಾತ್ರವಲ್ಲದೆ ಇನ್ನು ಮೂವರು ಮಹಿಳೆಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿರುವುದು ಬೆಳಕಿಗೆ ಬಂತು. ಇದನ್ನು ತಿಳಿದ ದರ್ಶನ್ ಮತ್ತು ತಂಡ ಮತ್ತಷ್ಟು ಆಕ್ರೋಶಗೊಂಡು ಆತನ ಮೇಲೆ ಹಿಂಸಾಚಾರದ ಪ್ರಮಾಣವನ್ನು ಹೆಚ್ಚಿಸಿತು.

ಹಲ್ಲೆಯಿಂದ ತೀವ್ರವಾಗಿ ನರಳುತ್ತಿದ್ದ ರೇಣುಕಾಸ್ವಾಮಿಗೆ ನಾನೇ ವೈಯಕ್ತಿಕವಾಗಿ ಊಟ ಮತ್ತು ನೀರನ್ನು ತಂದುಕೊಟ್ಟಿದ್ದೆ. ಆದರೆ ಪರಿಸ್ಥಿತಿ ನನ್ನ ಕೈಮೀರಿ ಹೋಗಿತ್ತು
ಚಾಲಕ ರವಿಶಂಕರ್ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದಾಗ ದರ್ಶನ್ ತೀವ್ರ ಆತಂಕಕ್ಕೊಳಗಾಗಿದ್ದರು. ಈ ಕೊಲೆ ಕೇಸ್‌ನಿಂದ ಪಾರಾಗಲು ನನಗೆ ಸಹಾಯ ಮಾಡದಿದ್ದರೆ ನಾನೇ ಗುಂಡು ಹಾರಿಸಿಕೊಂಡು ಸಾಯುತ್ತೇನೆ, ನಾನು ಬದುಕುವುದಿಲ್ಲ ಎಂದು ದರ್ಶನ್ ಹೆದರಿಸಿದ್ದರು. ಆ ಭೀತಿಯಿಂದಲೇ ನಾನು ಶವ ವಿಲೇವಾರಿ ಹಾಗೂ ಕೇಸ್ ಮುಚ್ಚಿಹಾಕಲು ಸಹಾಯ ಮಾಡಬೇಕಾಯಿತು
ಕೊಲೆ ಪ್ರಕರಣದ ಬಳಿಕ ಜೈಲು ಸೇರಿದ ಮೇಲೂ ದರ್ಶನ್ ನಮ್ಮನ್ನು ಬಿಡಲಿಲ್ಲ. ಜೈಲಿನಲ್ಲಿ ನಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಇದರಿಂದ ನಾನು ತೀವ್ರ ನೊಂದಿದ್ದು, ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ.
ಈ ಪ್ರಕರಣದಲ್ಲಿ ನನ್ನ ಯಾವುದೇ ನೇರ ತಪ್ಪಿಲ್ಲ. ನಾನು ಸಂದರ್ಭಕ್ಕೆ ಸಿಲುಕಿ ಸಹಾಯ ಮಾಡಬೇಕಾಯಿತು. ನನಗೆ ಗೊತ್ತಿರುವ ಎಲ್ಲಾ ನಿಜವಾದ ಸತ್ಯಗಳನ್ನು ಕೋರ್ಟ್ ಮುಂದೆ ಹೇಳಲು ಸಿದ್ಧನಿದ್ದೇನೆ. ದಯವಿಟ್ಟು ನನಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿ ಎಂದು ಪ್ರದೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಕನ್ನಡಿಗರು ತಲೆ ತಗ್ಗಿಸೋಕೆ ನಾವ್ ಬಿಡಲ್ಲ, ಹೆಮ್ಮೆಯಿಂದ ಸಿನಿಮಾ ನೋಡಿ – ʻಟಾಕ್ಸಿಕ್ʼ ಟ್ರೇಲರ್ ರಿಲೀಸ್ ಬಳಿಕ ಯಶ್ ಮಾತು
ಪ್ರದೋಷ್‌ಪಾತ್ರವೇನು?
ಗಿರಿನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಪ್ರದೋಷ್, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಅವರ ಹತ್ತಿರದ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ ಭಾರಿ ಮೊತ್ತದ ವೇತನ ಪಡೆಯುತ್ತಿದ್ದರೂ ಆತನಿಗೆ ಅಭಿನಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿತ್ತು.
ಸಿನಿಮಾಗಳಲ್ಲಿ ನಟಿಸುವ ಈ ಆಸಕ್ತಿಯೇ ಆತನನ್ನು ದರ್ಶನ್ ಸಂಪರ್ಕಕ್ಕೆ ತಂದಿತ್ತು. ಐಟಿ ಕೆಲಸದ ಜೊತೆಗೆ ದರ್ಶನ್ ಅಭಿನಯದ ‘ಬೃಂದಾವನ’ ಹಾಗೂ ‘ಬುಲ್‌ಬುಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರದೋಶ್ ಅಭಿನಯಿಸಿದ್ದ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಪಾತ್ರ ವಹಿಸಿದ್ದು, ಕೃತ್ಯದ ನಂತರ ದರ್ಶನ್ ಪಾರು ಮಾಡಲು ತೀವ್ರ ಯತ್ನ ನಡೆಸಿದ್ದ. ಈ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬಾರದಂತೆ ನೋಡಿಕೊಳ್ಳಲು ದರ್ಶನ್, ಪ್ರದೋಶ್‌ಗೆ 30 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರದೋಶ್ ನಿವಾಸದಲ್ಲಿದ್ದ ಈ 30 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅಧಿಕೃತ ಮಾಹಿತಿ ಸಲ್ಲಿಸಿದ್ದಾರೆ.



