ತುಮಕೂರು: ಅಧಿಕಾರಿಗಳು ಬರುತ್ತಾರೆ, ವರ್ಗಾವಣೆಯಾಗಿ ಹೋಗುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಪ್ರಾಮಾಣಿಕ ಹಾಗೂ ಜನಪರ ಸೇವೆಯ ಮೂಲಕ ಸಾರ್ವಜನಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅಂತಹ ಅಪರೂಪದ ಜನಾನುರಾಗಿ ಅಧಿಕಾರಿಯೊಬ್ಬರಿಗೆ ಕೊರಟಗೆರೆ ತಾಲೂಕಿನ ಜನತೆ ತೋರಿದ ಪ್ರೀತಿ-ಅಭಿಮಾನ ಇದೀಗ ರಾಜ್ಯದ ಗಮನ ಸೆಳೆದಿದೆ.
ಕೊರಟಗೆರೆಯಲ್ಲಿ ಈ ಹಿಂದೆ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ತುಮಕೂರು ಉಪವಿಭಾಗಾಧಿಕಾರಿಯಾಗಿ (AC) ಸೇವೆ ಸಲ್ಲಿಸುತ್ತಿರುವ ನಾಹೀದ್ ಜಮ್ ಜಮ್ ಅವರಿಗೆ ಕೊರಟಗೆರೆ ಪಟ್ಟಣದ ಜನತೆ ಒಗ್ಗೂಡಿ ‘ಮನೆಯ ಮಗಳು’ ಎಂಬಂತೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಕೊರಟಗೆರೆ ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರೇ ಮುಂದೆ ನಿಂತು ಈ ಸಮಾರಂಭವನ್ನು ಸಂಘಟಿಸಿದ್ದರು. ಸಾಂಪ್ರದಾಯಿಕವಾಗಿ ಸೀರೆ, ಹೂವು, ಹಣ್ಣು ಹಾಗೂ ಬಾಗಿನ ಅರ್ಪಿಸಿ, ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯ ಹಾಗೂ ಸಂತೋಷಕ್ಕಾಗಿ ಊರಿನ ಹಿರಿಯರು, ಮಹಿಳೆಯರು ಮನದುಂಬಿ ಹಾರೈಸಿದರು. ಅಧಿಕಾರಿಯೊಬ್ಬರು ವರ್ಗಾವಣೆಯಾದ ಮೇಲೂ ಜನರೇ ಕುಟುಂಬಸ್ಥರಂತೆ ಮುಂದೆ ನಿಂತು ಸೀಮಂತ ಆಚರಿಸಿದ್ದು ಸಭಿಕರ ಕಣ್ಮನ ಸೆಳೆಯಿತು.

ಸಾರ್ವಜನಿಕರ ಈ ಅದ್ಭುತ ಪ್ರೀತಿಗೆ ಮನಸೋತು ಭಾವುಕರಾಗಿ ಮಾತನಾಡಿದ ನಾಹೀದ್ ಜಮ್ ಜಮ್, “ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಡಾ. ಜಿ. ಪರಮೇಶ್ವರ್ ಅವರು ನನ್ನನ್ನು ಇಲ್ಲಿಗೆ ನಿಯೋಜಿಸದಿದ್ದರೆ ಈ ಅಪಾರ ಪ್ರೀತಿಯಿಂದ ವಂಚಿತಳಾಗುತ್ತಿದ್ದೆ. ಕೊರಟಗೆರೆ ಜನ ನನ್ನನ್ನು ಅಧಿಕಾರಿಯಂತೆ ನೋಡದೆ ತಮ್ಮ ಮನೆಯ ಸದಸ್ಯಳಂತೆ ಕಂಡಿದ್ದಾರೆ. ನನ್ನ ಜೀವನದ ಅತ್ಯಂತ ಭಾವನಾತ್ಮಕ ಮತ್ತು ಸ್ಮರಣೀಯ ಕ್ಷಣವಿದು” ಎಂದು ಕೃತಜ್ಞತೆ ಸಲ್ಲಿಸಿದರು.ಇದನ್ನೂ ಓದಿ: ಐದು ತಿಂಗಳ ಬಳಿಕ ದುಬಾರೆ ಸಾಕಾನೆ ಶಿಬಿರ ಓಪನ್ – ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪ್ರವಾಸಿಗರಿಗೆ ಅವಕಾಶ

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಮಾತನಾಡಿ, “ನಾಹೀದ್ ಜಮ್ ಜಮ್ ಅವರು ಕೇವಲ ಕಚೇರಿಯ ಕಡತಗಳಿಗೆ ಸೀಮಿತವಾಗದೆ ಸಾಮಾನ್ಯ ಜನರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದರು. ಅವರ ಸರಳತೆ ಮತ್ತು ದಕ್ಷತೆಯೇ ಇವತ್ತು ಇಡೀ ತಾಲೂಕಿನ ಜನ ಅವರನ್ನು ಮನೆಯ ಮಗಳಂತೆ ನೋಡುವಂತೆ ಮಾಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಹೀದ್ ಜಮ್ ಜಮ್ ಅವರ ಪತಿ, ಕುಟುಂಬ ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಪಾಲ್ಗೊಂಡು ಶುಭ ಹಾರೈಸಿದರು. ಅಧಿಕಾರ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ಕೇವಲ ಆಡಳಿತಾತ್ಮಕವಾಗಿರದೆ, ಮಾನವೀಯತೆಯಿಂದ ಕೂಡಿದ್ದರೆ ಅದು ಎಂತಹ ಬಾಂಧವ್ಯ ಸೃಷ್ಟಿಸಬಲ್ಲದು ಎಂಬುದಕ್ಕೆ ಕೊರಟಗೆರೆಯ ಈ ಸೀಮಂತ ಸಮಾರಂಭ ಸಾಕ್ಷಿಯಾಯಿತು.

