ಕನ್ನಡ ಸಿನಿಮಾರಂಗದಲ್ಲಿ (Sandalwood) ಮತ್ತೊಂದು ಹೊಸ ಬಗೆಯ ಸಿನಿಮಾ ಮೂಡಿ ಬರುತ್ತಿದೆ. ಶ್ರೀ ರೇಣುಕಾ ಎಲ್ಲಮ್ಮದೇವಿ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಚಿತ್ರಕ್ಕೆ ಮಿಸ್ಟರ್.ಕಲ್ಯಾಣ್ ಕುಮಾರ್ (Mr.Kalyan Kumar) ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಶೀರ್ಷಿಕೆ ಅನಾವರಣವನ್ನು ಕನ್ನಡದ ಖ್ಯಾತ ಐದು ಸಂಗೀತ ನಿರ್ದೇಶಕರು ಮಾಡಿರುವುದು ವಿಶೇಷ.
ಈ ಚಿತ್ರಕ್ಕೆ ಎಂ. ನರಸಿಂಹ ಬಾಬು ಮತ್ತು ಜಗದೀಶ್ ಎಂ ಅವರು ಬಂಡವಾಳ ಹೂಡಿದ್ದು, ಹತ್ತಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್, ಕೋ ಡೈರೆಕ್ಟರ್, ಕಂಠದಾನ ಕಲಾವಿದ ಮತ್ತು ಬರಹಾಗರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ವೈ ಎನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದ ಹರಿ ಪ್ರಸಾದ್ ಈ ಸಿನಿಮಾದ ನಾಯಕ. ಇವರು ಕಲ್ಯಾಣ್ ಕುಮಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಭಿನಂದನ್ ದೇಶ್ಪ್ರಿಯ ಸಂಭಾಷಣೆ ಮತ್ತು ಉಜ್ವಲ್ ಚಂದ್ರ ಅವರ ಸಂಕಲನವಿರಲಿದೆ. ಇದನ್ನೂ ಓದಿ: ಗೆಳತಿ ಗಾಯತ್ರಿ ಮೂಲಕ ಮತ್ತೆ ಬಣ್ಣ ಹಚ್ಚಿದ ವೈಷ್ಣವಿ ಗೌಡ
ಚಿತ್ರದ ಟೈಟಲ್ ಅನಾವರಣ ಗೊಳಿಸಿರುವ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಶ್ರೀಧರ್ ವಿ ಸಂಭ್ರಮ್, ವಿ ಮನೋಹರ್, ಅನೂಪ್ ಸೀಳಿನ್ ಮತ್ತು ವಿ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಚಿತ್ರದ ಸಂಗೀತದಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಲು ಹೊರಟಿದ್ದೇವೆ. ಹಾಗಾಗಿ ಐದು ಜನ ಸಂಗೀತ ನಿರ್ದೇಶಕರಿಂದ ಈ ಚಿತ್ರದ ಟೈಟಲ್ ರಿಲೀಸ್ ಮಾಡಿಸಿದ್ದೇವೆ” ಎಂಬುದು ನಿರ್ದೇಶಕರ ಮಾತು. ಚಿತ್ರತಂಡ ಈಗಷ್ಟೇ ಸ್ಕ್ರಿಪ್ಟ್ ಪೂಜೆಯನ್ನು ಮುಗಿಸಿಕೊಂಡು ಮುಂದಿನ ಕೆಲಸಗಳತ್ತ ಸಾಗುತ್ತಿದೆ. ಇತರ ತಂತ್ರಜ್ಞರು ಮತ್ತು ಕಲಾವಿದರನ್ನು ಇನ್ನೂ ಅಂತಿಮಗೊಳಿಸಬೇಕಿದೆ. ಮುಂದಿನ ತಿಂಗಳು ಕಡೆಯ ವಾರದಲ್ಲಿ ಮುಹೂರ್ತ ಮಾಡಿಕೊಂಡು ಶೂಟಿಂಗ್ ಹೊರಡುವ ಆಲೋಚನೆಯಲ್ಲಿದೆ ಈ ಚಿತ್ರ ತಂಡ. ಒಟ್ಟಾರೆ ‘ಸಮಸ್ತ ಸಿಂಗಲ್ ಗಳ ಆಶೀರ್ವಾದದೊಂದಿಗೆ’ ಮಿಸ್ಟರ್.ಕಲ್ಯಾಣ್ ಕುಮಾರ್ ಚಿತ್ರ ತಯಾರಾಗುತ್ತಿದೆ ಎಂಬುದು ಚಿತ್ರತಂಡದಿಂದ ಪೋಸ್ಟರ್ ಮೂಲಕ ತಿಳಿದು ಬರುತ್ತದೆ. ಇದನ್ನೂ ಓದಿ: ಮದುವೆ ಬ್ಯುಸಿಯಲ್ಲೂ ಜೋಡೆತ್ತು ಚಿತ್ರೀಕರಣದಲ್ಲಿ ಚಿಕ್ಕಣ್ಣ ಭಾಗಿ

