Karnataka
ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ರೌಡಿ ಶೀಟರ್ ಮೇಲೆ ಫೈರಿಂಗ್

ರಾಮನಗರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ರಾಮನಗರ ಜಿಲ್ಲೆಯ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಸಮೀಪದ ಸೂಲಿಕೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ನಿವಾಸಿ ಕಿರಣ್ ಅಲಿಯಾಸ್ ತಮಟೆ ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. 20 ದಿನಗಳ ಹಿಂದೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿ ಲೋಕನಾಥ್ ಅವರ ಮೇಲೆ ಹಲ್ಲೆ ನಡೆಸಿ ತನ್ನ ಸಹಚರರ ಜೊತೆ ಡಕಾಯಿತಿ ಮಾಡಿದ್ದ.
ಪ್ರಕರಣದ ಸಂಬಂಧ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಶನಿವಾರ ಕಿರಣ್ ನನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ವಿಚಾರವಾಗಿ ಬೆಳಗ್ಗೆ ಕಿರಣ್ ನನ್ನು ಸೂಲಿಕೆರೆ ಸಮೀಪದ ಹಳೇ ಭೈರೋಹಳ್ಳಿ ಬಳಿ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೇದೆ ವೀರಭದ್ರಗೆ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಆರೋಪಿ ಕಿರಣ್ ನ ಎಡಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
2016ರಲ್ಲಿ ಕೆಂಗೇರಿಯ ಮಾರಹನುಮ ಅಲಿಯಾಸ್ ಚಿಚಿ ಎಂಬಾತನನ್ನು ಕಿರಣ್ ಮರ್ಡರ್ ಮಾಡಿದ್ದ. ಅಲ್ಲದೆ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಪೊಲೀಸರ ಗುಂಡೇಟು ತಿಂದಿರುವ ಕಿರಣ್ ಹಾಗೂ ಪೇದೆ ವೀರಭಧ್ರ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
