ನವದೆಹಲಿ: ಕರ್ನಾಟಕ ಕಾಂಗ್ರೆಸ್ ನಾಯಕರ ಹೈಕಮಾಂಡ್ ಸಭೆಯ ಬೆನ್ನಲ್ಲೇ ಎದ್ದಿದ್ದ ಹಲವು ರಾಜಕೀಯ ಚರ್ಚೆಗಳು ಹಾಗೂ ವದಂತಿಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ತೆರೆ ಎಳೆದಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಸಭೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ವೇಣುಗೋಪಾಲ್ ಹೇಳಿದ್ದೇನು?
ನಾವು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದೇವೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾನು ಭಾಗವಹಿಸಿದ್ದೆವು.
ಸಭೆಯಲ್ಲಿ ಕೇವಲ ಮುಂಬರುವ ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತ್ರ ಮಾತುಕತೆಯಾಗಿದೆ.
ಚುನಾವಣಾ ವಿಚಾರವನ್ನು ಹೊರತುಪಡಿಸಿ ನಾವು ಮತ್ಯಾವ ಬಾಕಿ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಹಾಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಉಳಿದೆಲ್ಲಾ ವಿಚಾರಗಳು ಕೇವಲ ವದಂತಿ ಮತ್ತು ಊಹೆ ಮಾತ್ರ ಎಂದು ತಿಳಿಸಿದರು.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾಧ್ಯಮಗಳ ಯಾವುದೇ ಪ್ರಶ್ನೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಸುದ್ದಿಗೋಷ್ಠಿ ಆರಂಭದಲ್ಲೇ ತಿಳಿಸಿದ್ದರು. ವೇಣುಗೋಪಾಲ್ ಅವರ ಹೇಳಿಕೆ ಮುಗಿದ ಬೆನ್ನಲ್ಲೇ ಮಾಧ್ಯಮಗಳು ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗಲಿದ್ಯಾ ಎಂಬ ಪ್ರಶ್ನೆ ಕೇಳಿದ್ದಕ್ಕೆ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೇ ಕಾರಿನಲ್ಲಿ ತೆರಳಿದ್ದಾರೆ.
ಸುದ್ದಿಗೋಷ್ಠಿ ನಡೆಯುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೌನವಾಗಿದ್ದರು. ಸುದ್ದಿಗೋಷ್ಠಿ ಮುಗಿದ ಬಳಿಕ ಇಬ್ಬರು ಏನು ಮಾತನಾಡದೇ ತೆರಳಿದ್ದಾರೆ. ಸಿಎಂ ಕಾರು ಹತ್ತಿದ್ದರೆ ಡಿಕೆಶಿ ವೇಣುಗೋಪಾಲ್ ಜೊತೆ ಮಾತನಾಡುತ್ತಾ ಎಐಸಿಸಿ ಕಚೇರಿ ಪ್ರವೇಶಿಸಿದ್ದಾರೆ.
