ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಎಂಬ ಸುದ್ದಿ ಈಗ ಗಜಪ್ರಸವದಂತಾಗಿದೆ. ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದ ಮೊದಲ ದಿನದಿಂದಲೂ “ಸಿಎಂ ಬದಲಾಗುತ್ತಾರೆ, ಡಿ.ಕೆ. ಶಿವಕುಮಾರ್‌ಗೆ (DK Shivakumar) ಪಟ್ಟಾಭಿಷೇಕ ಆಗಲಿದೆ, ಹೈಕಮಾಂಡ್ ಮಟ್ಟದಲ್ಲೇ 50:50 ಒಪ್ಪಂದವಾಗಿದೆ” ಅಂತೆಲ್ಲಾ ನಡೆದ ಚರ್ಚೆಗಳಿಗೆ ಈಗ ಮೂರು ವರ್ಷ ತುಂಬಿದೆ. ಆದರೆ ಈ ಹೈಡ್ರಾಮಾ ಸಸ್ಪೆನ್ಸ್ ಮಾತ್ರ ಈಗಲೂ ಮುಂದುವರಿದಿದೆ.
ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಇಂದು ದೆಹಲಿಯ ಎಐಸಿಸಿ(AICC) ಕಚೇರಿಯಲ್ಲಿ ಕರ್ನಾಟಕದ ನಾಯಕತ್ವ ಹಾಗೂ ಮುಂಬರುವ ಚುನಾವಣೆಗಳ ಕುರಿತು ಹೈಕಮಾಂಡ್ ನಾಯಕರು ಮ್ಯಾರಾಥಾನ್ ಸಭೆ ನಡೆಸಿ ಯಾವುದಕ್ಕೂ ಉತ್ತರ ನೀಡದೇ ಜಾರಿಕೊಂಡು ಮತ್ತೊಂದು ಡೆಡ್‌ಲೈನ್‌ಗೆ ವಿಸ್ತರಿಸಿದ್ದಾರೆ.
6 ಗಂಟೆಗಳ ಕಾಲ ನಡೆದ ‘ಮ್ಯಾರಾಥಾನ್’ ಸಭೆ
ಬೆಳಗ್ಗೆ 11 ಗಂಟೆಗೆ ಆರಂಭವಾದ ಹೈಕಮಾಂಡ್ ಸಭೆ ಸಂಜೆ 5:30ರ ವರೆಗೂ ಸುದೀರ್ಘವಾಗಿ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ (Rahul Gandhi), ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸರಣಿ ಚರ್ಚೆ ನಡೆಸಿದರು. ಈ ನಡುವೆ ರಾಹುಲ್ ಗಾಂಧಿ ಅವರು ಸಿಎಂ ಮತ್ತು ಡಿಸಿಎಂ ಜೊತೆ ಪ್ರತ್ಯೇಕವಾಗಿ ‘ಒನ್ ಟು ಒನ್’ ಮೀಟಿಂಗ್ ನಡೆಸಿ ಮಹತ್ವದ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಸಭೆಯಲ್ಲಿ ಡಿಕೆಶಿ ‘ತ್ರಿಶೂಲ ವ್ಯೂಹ’: ಮೂರು ಖಡಕ್ ಷರತ್ತು ವಿಧಿಸಿ ಬಿಗಿಪಟ್ಟು!
ಸುದೀರ್ಘ ಸಭೆಯ ಬಳಿಕ ಹೊರಬಂದ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, “ಮಾಧ್ಯಮಗಳು ಊಹಿಸಿಕೊಂಡಂತೆ ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, “ಕರ್ನಾಟಕದ ನಾಯಕತ್ವ ಬದಲಾವಣೆ ವಿಷಯ ಸಭೆಯಲ್ಲಿ ಚರ್ಚೆಯಾಗಿಯೇ ಇಲ್ಲ. ನಾವು ಕೇವಲ ಮುಂಬರುವ ರಾಜ್ಯಸಭೆ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ಕುರಿತು ಮಾತ್ರ ಮಾತುಕತೆ ನಡೆಸಿದ್ದೇವೆ” ಎಂದು ವದಂತಿಗಳಿಗೆ ತೆರೆ ಎಳೆದರು. ಇದನ್ನೂ ಓದಿ: ದಿಲ್ಲಿಯಲ್ಲೂ ದೂರ ದೂರ – ಸಿಎಂ & ಟೀಂನಿಂದ ಅಂತರ ಕಾಯ್ದುಕೊಂಡ ಡಿಕೆಶಿ
ಹೈಕಮಾಂಡ್ ಸಂದೇಶವೇನು?
ಮೇಲ್ನೋಟಕ್ಕೆ ಚುನಾವಣೆಗಳ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ನಾಯಕರು ಹೇಳಿದ್ದರೂ, ಆಂತರಿಕವಾಗಿ ಹೈಕಮಾಂಡ್ ಉಭಯ ನಾಯಕರಿಗೆ ಕಡಕ್ ಸಂದೇಶ ರವಾನಿಸಿದ್ದಾರೆ.
ಮುಂಬರುವ ರಾಜ್ಯಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ. ರಾಜ್ಯಸಭೆ ಚುನಾವಣೆ ಮುಗಿದ ನಂತರ ನಾಯಕತ್ವದ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಆ ನಿರ್ಧಾರಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಬದ್ಧರಾಗಿರಬೇಕು.
ಪಕ್ಷಕ್ಕೆ ಇಬ್ಬರು ನಾಯಕರು ಅನಿವಾರ್ಯವಾಗಿದ್ದು, ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸಬೇಕು. ಯಾವುದೇ ಕಾರಣಕ್ಕೂ ಸಭೆಯ ಗೌಪ್ಯತೆಯನ್ನು ಕಾಪಾಡಬೇಕು ಹಾಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ತೋರ್ಪಡಿಸಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ.
