ಶ್ರೀನಗರ: ಉಗ್ರರ ಬೆದರಿಕೆಯಿಂದಾಗಿ (Terror Threat) ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ಕಾಶ್ಮೀರಿ ಪಂಡಿತ (Kashmiri Pandit) ನೌಕರರನ್ನು ಆ.25ರ ವರೆಗೆ ರಜೆ ಮೇಲೆ ಕಳುಹಿಸಲಾಗಿದೆ. ಅವರನ್ನೆಲ್ಲ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (Lashkar-e-Taiba) ಹೆಸರಿನಲ್ಲಿ ಬೆದರಿಕೆ ಪತ್ರ ಹರಿದಾಡಿತ್ತು. ಅದರಲ್ಲಿ ಕೆಲವು ಉದ್ಯೋಗಿಗಳನ್ನು ಹೆಸರಿಸಲಾಗಿತ್ತು. ಬೆದರಿಕೆ ಪತ್ರದಲ್ಲಿ ಹೆಸರಿಸಲಾದ ಎಲ್ಲರನ್ನೂ ಸುರಕ್ಷಿತವಾಗಿ ಜಮ್ಮುವಿಗೆ (Jammu And Kashmir) ಸ್ಥಳಾಂತರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನೌಕರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ 19 ಮೋಸ್ಟ್ ವಾಂಟೆಡ್ ಉಗ್ರರು? – ಸ್ವಾತಂತ್ರ್ಯೋತ್ಸವದ ಹೊತ್ತಲ್ಲೇ ಪೊಲೀಸರಿಂದ ಪೋಸ್ಟರ್ ಬಿಡುಗಡೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಶ್ಮೀರಿ ಪಂಡಿತ ಉದ್ಯೋಗಿ ಅಮಿತ್ ಕೌಲ್, ಬೆದರಿಕೆ ಬಂದ ನಂತರ, ಪೊಲೀಸರು ಕೆಲಸಕ್ಕೆ ಹೋಗದಂತೆ ನಮಗೆ ಸೂಚಿಸಿದ್ದಾರೆ. ಅಲ್ಲದೇ ಕಣಿವೆಯಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಮನೆಗಳಿಂದ ಹೊರಗೆ ಬರದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
2010 ರಲ್ಲಿ ಜಾರಿಗೆ ತರಲಾದ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಸುಮಾರು 6,000 ಕಾಶ್ಮೀರಿ ಪಂಡಿತರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. 1990 ರಲ್ಲಿ ಪ್ರತ್ಯೇಕತಾವಾದಿ ಚಳುವಳಿ ಭುಗಿಲೆದ್ದ ನಂತರ ತಮ್ಮ ತಾಯ್ನಾಡಿನಿಂದ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ಮರಳುವಿಕೆ ಮತ್ತು ಪುನರ್ವಸತಿಗೆ ಅನುಕೂಲವಾಗುವಂತೆ ಈ ಕ್ರಮಕೈಗೊಳ್ಳಲಾಗಿತ್ತು.
2022 ರಲ್ಲಿ ಭಯೋತ್ಪಾದಕರು ಈ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐದು ಕಾಶ್ಮೀರಿ ಪಂಡಿತರು ಸಾವನ್ನಪ್ಪಿದ್ದರು. ಬಳಿಕ ಜಮ್ಮುವಿಗೆ ವರ್ಗಾಯಿಸುವಂತೆ ಒತ್ತಾಯಿಸಿ ಪಿಎಂ ಪ್ಯಾಕೇಜ್ ನೌಕರರಿಂದ ಏಳು ತಿಂಗಳ ಕಾಲ ಬೃಹತ್ ಪ್ರತಿಭಟನೆ ನಡೆದಿತ್ತು. ಸರ್ಕಾರ ಈ ಉದ್ಯೋಗಿಗಳನ್ನು ಜಮ್ಮುವಿನಲ್ಲಿ ನಿಯೋಜಿಸಲು ನಿರಾಕರಿಸಿತ್ತು. ಬಳಿಕ ಅವರನ್ನು ಶ್ರೀನಗರ ಮತ್ತು ಕಣಿವೆಯ ಇತರ ಪ್ರಮುಖ ಪಟ್ಟಣಗಳ ಸುರಕ್ಷಿತ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.
ಜುಲೈ 22 ರಂದು ಅನಂತನಾಗ್‌ನಲ್ಲಿ ನಡೆದ ಇತ್ತೀಚಿನ ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಅಲ್ಪಸಂಖ್ಯಾತರು ಮತ್ತು ಪಂಡಿತ ನೌಕರರು ವಾಸಿಸುವ ಪ್ರದೇಶಗಳಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿತ್ತು. ಭದ್ರತೆ ಹೆಚ್ಚಿಸಿದ ಬಳಿಕ ಸುಮಾರು 3,000 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಗಳನ್ನು ಓವರ್ ಗ್ರೌಂಡ್ ವರ್ಕರ್ಸ್ (OGWs) ಎಂದು ಪೊಲೀಸರು ಕರೆದಿದ್ದಾರೆ. (ಅಂದರೆ ಇವರು ಭಯೋತ್ಪಾದಕರಿಗೆ ರಹಸ್ಯವಾಗಿ ಸಹಾಯ ಮಾಡುವವರು ಎಂದರ್ಥ). ಇತ್ತೀಚೆಗೆ ಭಯೋತ್ಪಾದಕ ಗುಂಪುಗಳಿಗೆ ಸ್ಥಳೀಯ ಯುವಕರ ನೇಮಕಾತಿಗಳ ಸಂಖ್ಯೆ ಬಹುತೇಕ ಶೂನ್ಯಕ್ಕೆ ತಲುಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅನಂತನಾಗ್‌ನಲ್ಲಿ ಬಾಲ ಬಿಚ್ಚಿದ ಉಗ್ರರು – ಇಬ್ಬರ ಮನೆ ಧ್ವಂಸಗೊಳಿಸಿದ ಸೇನೆ

