– ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದರಿಂದ ಹೆಚ್‌ಡಿಕೆಗೆ ರಾತ್ರಿ ನಿದ್ರೆ ಬರುತ್ತಿಲ್ಲ
– ಮೋದಿ, ಅಮಿತ್ ಶಾ ಕೈ-ಕಾಲು ಹಿಡಿದು, ನಿಮ್ಮ ಜೊತೆ ಇರ್ತೀನಿ ಅಂತ ಬೇಡಿಕೊಂಡ್ರು: ಹೆಚ್‌ಡಿಕೆಗೆ ಸಚಿವ ಟಾಂಗ್
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಸಚಿವ ಬಾಲಕೃಷ್ಣ (H.C.Balakrishna) ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಹಫ್ತಾ ವಸೂಲಿ ಗಿರಾಕಿ ಎಂದು ಟಾಂಗ್ ಕೊಟ್ಟಿದ್ದಾರೆ.
ಹೆಚ್‌ಡಿಕೆ ವಿರುದ್ಧ ಗುಡುಗಿದ ಸಚಿವ ಬಾಲಕೃಷ್ಣ, ಏನೇ ಆರೋಪ ಮಾಡಿದರೂ ಸಿಎಂ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿರುತ್ತಾರೆ. ಇವೆಲ್ಲ ಹೊಸ ವಿಷಯನಾ? ಕುಮಾರಸ್ವಾಮಿ ಅವರು ‘3ಬಿ’ಗೆ ಫೇಮಸ್. ಬ್ಲಾಕ್ ಮೈಲರ್, ಬ್ಲಾಕ್ ಸ್ಟಾಬರ್, ಬ್ಲಾಕ್ ಮ್ಯಾಜಿಕ್.. ಇದೆ ಇವರ ಕೆಲಸ. ಯಡಿಯೂರಪ್ಪ ಮತ್ತು ಧರ್ಮಸಿಂಗ್‌ಗೆ ಬ್ಯಾಕ್ ಸ್ಟಾಬ್ ಮಾಡಿದರು, ಪ್ರತಿದಿನ ಬ್ಲಾಕ್ ಮೈಲ್ ಮಾಡ್ತರೆ. ಬ್ಲಾಕ್ ಮ್ಯಾಜಿಕ್ ಮಾಡಿ ಜನರನ್ನ ಮರಳು ಮಾಡ್ತಾರೆ. ಬರಿ ಹೆಸರಿಸೋದು, ಬ್ಲ್ಯಾಕ್‌ಮೇಲ್ ಮಾಡೋದು ಇದೆ ಆಯ್ತು. ಕೆಲಸ ಇಲ್ಲದ ಕುಂಬಾರ ಅದೇನೋ ಮಾಡಿದ್ನಂತೆ ಹಾಗಾಯಿತು ಇವರ ಕಥೆ. ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದರಿಂದ ರಾತ್ರಿ ನಿದ್ರೆ ಬರ್ತಿಲ್ಲವಂತೆ. ಸ್ನೇಹಿತರ ಬಳಿ ಹೇಳಿಕೊಂಡಿದ್ದಾರಂತೆ. ಸರಿಯಾಗಿ ನಿದ್ರೆ ಮಾಡೋಕೆ ಹೇಳಿ. ಮೊದಲೇ ಆರೋಗ್ಯ ಸರಿ ಇಲ್ಲ. ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೂ ಡಿ.ಕೆ.ಶಿವಕುಮಾರ್ ಕಾರಣ ಅಂತಾರೆ ಮತ್ತೆ. ಈಗ ಆರೋಪ ಮಾಡೋಕೆ ಎರೆಡು ಬಾರಿ ಸಿಎಂ ಆದಾಗ ಏನು ಗೆಣಸು ಕೀಳುತ್ತಿದ್ರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2028ಕ್ಕೂ ಗ್ಯಾರಂಟಿಗಳು ಮುಂದುವರೆಯುತ್ತವೆ: ಡಿಕೆಶಿ
ಕುಮಾರಸ್ವಾಮಿ ಹಫ್ತಾ ವಸೂಲಿ ಗಿರಾಕಿ. ಯಾವಾಗ ಹಫ್ತಾ ವಸೂಲಿ ಮಾಡಿದ್ದಾರೆ ಹೇಳಲಾ? ನಮ್ಮದು ದಾಖಲೆ ಇದೆ. ಬಿಡುಗಡೆ ಮಾಡ್ತೀವಿ. ಕೆಜಿಎಫ್ 2-3 ನಮ್ಮ ಬಳಿಯೂ ಇದೆ. ಹಸಿರು ವಲಯದ್ದು ಮಾತಾಡ್ತೀನಿ ಅಂದರು. ರಾತ್ರಿ ಸೂಟ್ಕೆಸ್ ಬಂತು ಬೆಳಗ್ಗೆ ಕೇಳಿದರೆ ಮುಂದೆ ಮಾತಾಡ್ತೀನಿ ಅಂದರು ಎಂದು ಹೆಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದರು.
ಏಕವಚನದಲ್ಲಿ ಬೈತಾರೆ ನಮಗೂ ಏಕವಚನ ಬರುತ್ತೆ. ಖೇಣಿ ಹತ್ತಿರ ವ್ಯವಹಾರ ಮಾಡೋಕೆ ಹೋಗಿದ್ದಾರೆ ಆಗಿಲ್ಲ. ದರಿದ್ರ ಸರ್ಕಾರ ಅಂತಿಯಾ? ಕೇಂದ್ರದಿಂದ ಎಕರೆಗೆ 50 ಸಾವಿರ ಕೊಡಿಸಪ್ಪ ನೀನು ಕೇಂದ್ರ ಸಚಿವ ಅಲ್ವಾ? ಚನ್ನಮ್ಮ ಅವರಿಗೆ ಐಟಿ ಅವರು ನೋಟಿಸ್ ಕೊಟ್ಟಿದ್ದರು. ಇವರು ಹೋಗಿ ಮೋದಿ, ಅಮಿತ್ ಶಾ ಕೈ-ಕಾಲು ಹಿಡಿದುಕೊಂಡರು. ನಿಮ್ಮ ಕೈ ಮುಗಿಯುತ್ತೇನೆ ನಿಮ್ಮ ಜೊತೆ ಇರ್ತೀವಿ. ನಮ್ಮದು ಆಚೆ ತರಬೇಡಿ ಅಂತ ಕಾಲು ಹಿಡಿದುಕೊಂಡ್ರು. ಚನ್ನಮ್ಮ ಅವರಿಗೆ ನೋಟಿಸ್ ಕೊಟ್ಟ ಕೂಡಲೇ ಮೈತ್ರಿ ಮಾಡಿಕೊಂಡರು. ಅವರ ಅಣ್ಣ ಬಾಲಕೃಷ್ಣ ಗೌಡರ ಆಸ್ತಿ ಒಂದು ವರ್ಷದಲ್ಲಿ 1 ಸಾವಿರ ಕೋಟಿ ಆಯ್ತು. ಅದು ಹೇಗೆ ಆಯ್ತು ಅದರ ತನಿಖೆ ನಡೆಯಲಿ ಮೊದಲು ಎಂದರು.
ನಮ್ಮ ಹಳೆ ಫ್ರೆಂಡ್ ಈಗ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದೇನೆ. ಮಾಧ್ಯಮದವರು ಇಂತಹ ಬ್ಲ್ಯಾಕ್‌ಮೇಲರ್‌ನ ತೋರಿಸಬಾರದು. ಸಿದ್ದರಾಮಯ್ಯ ಸಿಎಂ ಆದಾಗ ಮಾತನಾಡಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದು ಸಹಿಸೋಕೆ ಆಗುತ್ತಿಲ್ಲ ಅದಕ್ಕೆ ಮಾತನಾಡುತ್ತಿದ್ದಾರೆ. ಗೌಡರ ಗದ್ದಲ ಅನ್ನೋ ರೀತಿ ಶಿವಕುಮಾರ್ ಸಿಎಂ ಆಗಿದ್ದಕ್ಕೆ ನಿದ್ರೆ ಬರ್ತಿಲ್ಲ ಅನ್ನುತಿದ್ದಾರಂತೆ ಎಂದು ಕಿಚಾಯಿಸಿದರು. ಇದನ್ನೂ ಓದಿ: 38 ಸಾವಿರ ಕೋಟಿ ಬಾಕಿ ಹಣ ಕೊಡಿ, ಶೇ.70 ರಷ್ಟು ಶಾಸಕರಿಂದ ಕಮಿಷನ್ ಕಾಟ: ಸರ್ಕಾರದ ವಿರುದ್ಧ ಸಿಡಿದ ಗುತ್ತಿಗೆದಾರರು
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾಕೆ ಮಾತನಾಡಲಿಲ್ಲ? ಇವಾಗ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡ್ತಾ ಇರೋದು ಯಾಕೆ? ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ. ಕುಮಾರಸ್ವಾಮಿ ಅವರಿಗೆ ಬೇರೆ ಏನು ಕೆಲಸ ಇಲ್ಲ ಅನಿಸುತ್ತೆ. ಕೇಂದ್ರದವರು ಹೆಚ್‌ಡಿಕೆಗೆ ಸುಪಾರಿ ಕೊಟ್ಟಿದ್ದಾರೆ. ನಮ್ಮವರು ಅಂತ ಹೇಳಿಕೊಳ್ಳೋದಕ್ಕೆ ಅಸಹ್ಯ ಆಗುತ್ತೆ. ಕೇಂದ್ರ ಮಂತ್ರಿ ಆಗಿದ್ದೀರಲ್ಲ, ಮೇಕೆದಾಟು ಯೋಜನೆಗೆ ಅನುಮತಿ ಕೊಡ್ಸಿ. ನಿದ್ದೆ ಬರ್ತಿಲ್ಲವಂತೆ ಡಿ.ಕೆ.ಶಿವಕುಮಾರ್ ನೋಡಿ. ಕಣ್ಣು ಮುಚ್ಕೊಂಡು ನಿದ್ದೆ ಮಾಡಿ, ಏನಾದ್ರು ಹೆಚ್ಚು ಕಮ್ಮಿ ಆದ್ರೆ ಸುಮ್ನೆ ನಮ್ಮ ಮೇಲೆ ಆರೋಪ ಬರುತ್ತೆ. 2007, 2018 ರಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತಲ್ಲ ಏನ್ ಮಾಡ್ತಾ ಇದ್ರು? ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡೋದಕ್ಕೆ ಹೇಳಿ. ಅದು ಬಿಟ್ಟು ಬ್ಲ್ಯಾಕ್‌ಮೇಲ್ ಮಾಡ್ಕೊಂಡು ಕೂತಿದ್ರೆ ಹೇಗೆ? ಟೋಲ್ ಕಟ್ಟಬೇಡಿ ಅನ್ನುವ ಇವರು ಕಟ್ಟದಿದ್ರೆ, ಅಲ್ಲೇ ಹೋಗಿ ರೋಡ್‌ಗೆ ಮಲಗಿಕೊಳ್ಳಲಿ ಎಂದು ಕಿಡಿಕಾರಿದರು.

