ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹಲವೆಡೆ ಸಂಜೆ 6:30ರ ನಂತರ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆ (Rain) ಆರಂಭವಾಗಿದೆ. ಮಳೆಯ ತೀವ್ರತೆಗೆ ನಗರದ ಪ್ರಮುಖ ಮೆಟ್ರೋ (Namma Metro) ಮಾರ್ಗವೊಂದರಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ನಗರದಲ್ಲಿ ಬೀಸುತ್ತಿರುವ ಭಾರಿ ಗಾಳಿಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಟ್ರ್ಯಾಕ್ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಐಟಿಪಿಎಲ್ (ITPL) ಮತ್ತು ಸತ್ಯಸಾಯಿ ಪ್ರಶಾಂತ್ ನಿಲಯಂ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಯ ಮೇಲೆ ಮರದ ಕೊಂಬೆ ಬಿದ್ದಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಆದರೆ, ಗರುಡಾಚಾರ್ ಪಾಳ್ಯ ಮತ್ತು ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದ (Purple Line) ರೈಲುಗಳ ಸಂಚಾರ ಎಂದಿನಂತೆ ಮುಂದುವರಿದಿದೆ.
ಆರಂಭದಲ್ಲಿ ಟೌನ್ ಹಾಲ್, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ವಿಧಾನಸೌಧ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್, ಯಶವಂತಪುರ ಹಾಗೂ ವಿಧಾನಸೌಧ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಜೋರು ಮಳೆ ದಾಖಲಾಗುತ್ತಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಸಮಯದಲ್ಲಿ ಮಳೆ ಶುರುವಾಗಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ರಾಜಧಾನಿಯಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಬೆಂಗಳೂರು ನಗರಕ್ಕೆ ಇಂದಿಗೆ ‘ಯಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಮರಗಳ ಕೆಳಗೆ ನಿಲ್ಲದಂತೆ ಮತ್ತು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
