ಬೆಂಗಳೂರು: ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಸಂಭ್ರಮದಲ್ಲಿದೆ. ನೀವು ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ. ಆಗ ಈ ಸಂಭ್ರಮಕ್ಕೆ ಅರ್ಥ ಬರುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸಂದೇಶ ನೀಡಿದರು.
ಸ್ಯಾಂಕಿ ರಸ್ತೆಯ ಗಾಲ್ಫ್ ಕ್ಲಬ್ ನಲ್ಲಿ ಬುಧವಾರ ನಡೆದ ಬೆಂಗಳೂರು ಗಾಲ್ಫ್ ಕ್ಲಬ್‌ನ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಿದರು.
ಗಾಲ್ಫ್ ಕ್ಲಬ್ 150 ವರ್ಷ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆಗಳು. ನಾನು ಮುಖ್ಯಮಂತ್ರಿಯಾದ ಬಳಿಕ ನಾನು ಭಾಗವಹಿಸುತ್ತಿರುವ ಮೊದಲ ಖಾಸಗಿ ಕಾರ್ಯಕ್ರಮ. ನಾನು ಸಿಎಂ ಎನ್ನುವುದಕ್ಕಿಂತ ಇಲ್ಲಿನ ಸದಸ್ಯ. ಹೀಗಾಗಿ ಬಂದಿದ್ದೇನೆ. ನನ್ನ ಮಾತು ನಿಮಗೆ ಹಿತವಾಗಿರುವುದಿಲ್ಲ. ನಿಮ್ಮ ಚಪ್ಪಾಳೆ ಬೇಡ. ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಆದರೆ ನಾನು ಸತ್ಯ ನುಡಿಯಬೇಕು ಎಂದರು.
ಬೆಂಗಳೂರಿನಲ್ಲಿ ಮತ್ತಷ್ಟು ಗಾಲ್ಫ್ ಕೋರ್ಸ್ ನಿರ್ಮಿಸಬೇಕಾಗಿತ್ತು
ಈ ಕ್ಲಬ್‌ಗೆ ದೊಡ್ಡ ಇತಿಹಾಸವಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ. ನೀವುಗಳು ಯಾರೂ ಸಣ್ಣವರಲ್ಲ. ಬೆಂಗಳೂರು ಕಟ್ಟುವ ಸಾಮರ್ಥ್ಯ ಇರುವ ಅಧಿಕಾರಿಗಳು, ಉದ್ಯಮಿಗಳು ಇದ್ದೀರಿ. 150 ವರ್ಷದ ಇತಿಹಾಸವಿರುವ ಗಾಲ್ಫ್ ಕ್ಲಬ್, ಇಷ್ಟು ಹೊತ್ತಿಗೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಗಾಲ್ಫ್ ಕೋರ್ಸ್ ನಿರ್ಮಿಸಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ. ನಿಮ್ಮಲ್ಲಿ ಏನು ಕಡಿಮೆ ಇದೆ ಎಂದು ಪ್ರಶ್ನಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗಾಗಿ ಬಂದಾಗ, ಇಡೀ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಚಾರವನ್ನು ನಾನು ವಿಧಾನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದೇನೆ. ನಿಮಗೆ ಕಾಲ ಮಿಂಚಿಲ್ಲ. ಈಗಲೂ ಸಮಯವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಅರಿವಿದೆ ಎಂದರು.
