ಚಿಕ್ಕಮಗಳೂರು: ಕಳಸ ತಾಲೂಕಿನ ಹೊರನಾಡು ಗ್ರಾಮದ ಹೋಟೆಲ್ ಒಂದರಲ್ಲಿ ಪ್ರವಾಸಿಗರಿಗೆ ನೀಡಿದ್ದ ವಡೆಯಲ್ಲಿ ಹಲ್ಲಿ ಪತ್ತೆಯಾಗಿದೆ. ವಡೆಯಲ್ಲಿ ಮಿಕ್ಸ್ ಆಗಿ ಎಣ್ಣೆಯಲ್ಲಿ ಬೆಂದಿದ್ದರಿಂದ ಮೊದಲಿಗೆ ಪ್ರವಾಸಿಗರಿಗೆ ಅದು ಹಲ್ಲಿ ಎಂದು ತಿಳಿದಿಲ್ಲ. ಅರ್ಧ ವಡೆ ತಿಂದ ಬಳಿಕ ಸತ್ತ ಹಲ್ಲಿ ಇರುವುದು ಗೊತ್ತಾಗಿದೆ.

ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದ ಆರು ಜನರ ಪ್ರವಾಸಿಗರ ತಂಡ ಖಾಸಗಿ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಬಂದಿದ್ದರು. ತಿಂಡಿ ತಿನ್ನುವಾಗ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಪ್ರವಾಸಿಗ ಅಭಿಷೇಕ್ ಹೋಟೆಲ್ ಮಾಲೀಕರಿಗೆ ಹಲ್ಲಿಯನ್ನು ತೋರಿಸಿದಾಗ ಮಾಲೀಕರು ಜಗಳಕ್ಕೆ ಬಂದು ಹಣ ಕೊಡಬೇಡಿ ಹೋಗಿ ಎಂದಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್ ಸೇನೆ ಮೇಲೆ ದಾಳಿಗೆ ಅಸಾಫುಲ್ ಪ್ಲ್ಯಾನ್ – ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮಕ್ಕಳು ವಡೆಯನ್ನ ತಿಂದಿದ್ದಾರೆ. ಏನಾದರೂ ಹೆಚ್ಚು-ಕಡಿಮೆ ಆದರೆ ಎಂದು ಆಸ್ಪತ್ರೆಗೆ ತೋರಿಸುವಂತೆ ಅಭಿಷೇಕ್ ಆಗ್ರಹಿಸಿದ್ದಾರೆ. ಆದರೆ, ಹೊಟೇಲ್ ಮಾಲೀಕ ಆಸ್ಪತ್ರೆಗೆ ತೋರಿಸಲು ನಿರಾಕರಿಸಿದ್ದಾರೆ. ಕೂಡಲೇ ಪ್ರವಾಸಿಗರು 112ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೊದಲು ಆಸ್ಪತ್ರೆಗೆ ತೋರಿಸಿ ಆಮೇಲೆ ಮಾತನಾಡೋಣ ಎಂದು ಮಕ್ಕಳು ಸೇರಿದಂತೆ ಆರು ಜನ ಪ್ರವಾಸಿಗರನ್ನು ಕಳಸ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರೀಕ್ಷೆ ನಡೆಸಿದ್ದಾರೆ.
ಅದೃಷ್ಟವಶಾತ್, ಯಾರಿಗೂ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ. ಬಳಿಕ ಪ್ರವಾಸಿಗರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಬಲೂಚಿಸ್ತಾನ್ ಗೃಹ ಸಚಿವರ ಬೆಂಗಾವಲು ವಾಹನದ ಮೇಲೆ ದಾಳಿ – 3 ಪೊಲೀಸರು ಸೇರಿ 6 ಮಂದಿಗೆ ಗಾಯ
