ಕ್ವೆಟ್ಟಾ: ಬಲೂಚಿಸ್ತಾನ್ (Balochistan) ಗೃಹ ಸಚಿವ ಮೀರ್ ಜಿಯಾವುಲ್ಲಾ ಲ್ಯಾಂಗೋವ್ (Mir Ziaullah Langove) ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 3 ಪೊಲೀಸರು ಸೇರಿ 6 ಮಂದಿಗೆ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಸಚಿವರು ಪಾರಾಗಿದ್ದಾರೆ.

ಸಚಿವರು ಕಲಾತ್‌ನಿಂದ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಖದ್ ಕೋಚಾ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡ 6 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ನವಾಬ್ ರೈಸಾನಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭಿರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಕ್ವೆಟ್ಟಾಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಗಲ್ಫ್ ಉದ್ಯೋಗಕ್ಕಿಂತ ಭಾರತೀಯ ಸೇನೆಯೇ ಉತ್ತಮ- ನೇಪಾಳದಲ್ಲಿ ನೇಮಕಾತಿ ಪುನರಾರಂಭಿಸುವಂತೆ ಬೃಹತ್ ಪ್ರತಿಭಟನೆ
ಗಾಯಾಳುಗಳ ಗುರುತುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಗಾಯಗೊಂಡವರಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಭದ್ರತಾ ಪಡೆಗಳಿಂದ ಶೋಧ
ದಾಳಿಯ ನಂತರ, ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ. ಖಾದ್ ಕೋಚಾದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಲಂಗೋವ್ ಬಲೂಚಿಸ್ತಾನ್ ಅವಾಮಿ ಪಕ್ಷದ (ಬಿಎಪಿ) ಸದಸ್ಯರಾಗಿದ್ದಾರೆ. ಮಾರ್ಚ್‌ನಲ್ಲಿ ಬಲೂಚ್ ಪ್ರಾಂತ್ಯದ ಗೃಹ ಸಚಿವರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಇದನ್ನೂ ಓದಿ: ದೆಹಲಿ ಕೆಂಪುಕೋಟೆ ದಾಳಿ ಆಲ್ ಖೈದಾ ಕೃತ್ಯ – ವಿಶ್ವಸಂಸ್ಥೆ ಭದ್ರತಾ ಮಂಡಳಿ
