– ರಾಸಾಯನಿಕ-ಜೈವಿಕ ಅಸ್ತ್ರ ಬಳಕೆಯ ತೀವ್ರ ಆತಂಕ
– ಬಾಂಗ್ಲಾದಲ್ಲಿ ನೆಲೆ ಸ್ಥಾಪನೆಗೆ ಯತ್ನ
ನ್ಯೂಯಾರ್ಕ್/ನವದೆಹಲಿ: ದೆಹಲಿಯ ಕೆಂಪುಕೋಟೆ (Red Fort Blast) ಬಳಿ ಕಳೆದ ನವೆಂಬರ್ 2025 ರಲ್ಲಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣದ ಹೊಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಆಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಭಯೋತ್ಪಾದಕ ಸಂಘಟನೆ ನಡೆಸಿದೆ ಎಂದು ಅಧಿಕೃತವಾಗಿ ತಿಳಿಸಿದೆ.
ಯುಎನ್‌ಎಸ್‌ಸಿಯ Analytical Support and Sanctions Monitoring Team 38 ನೇ ವರದಿ ಈ ಮಹತ್ವದ ವಿಚಾರವನ್ನು ಉಲ್ಲೇಖಿಸಿದೆ. ಈ ದಾಳಿಯಲ್ಲಿ 11 ಜನರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ವರದಿಯಲ್ಲಿ ಏನಿದೆ?
AQIS ಸಣ್ಣ ಸಣ್ಣ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಾದೇಶಿಕ ಭಯೋತ್ಪಾದಕ ಗುಂಪಾಗಿ ಬೆಳೆಯುತ್ತಿದೆ. ಭಾರತೀಯ ಉಪಖಂಡದಲ್ಲಿ ಹಣಕಾಸು ಹಾಗೂ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಬಲಪಡಿಸಿಕೊಳ್ಳುತ್ತಿದೆ. ಈ ಉಗ್ರ ಸಂಘಟನೆಯು ಬಾಂಗ್ಲಾದೇಶದಲ್ಲಿ ತನ್ನ ಹೊಸ ಜಾಲ ಹಾಗೂ ನೆಲೆಗಳನ್ನು ಸ್ಥಾಪಿಸಲು ನಿರಂತರವಾಗಿ ಯತ್ನಿಸುತ್ತಿದೆ
ಈ ಹಿಂದೆ ಯುಎನ್ ಸದಸ್ಯ ರಾಷ್ಟ್ರವೊಂದು ನವೆಂಬರ್ ಸ್ಫೋಟದ ಹಿಂದೆ ‘ಜೈಷ್-ಎ-ಮೊಹಮ್ಮದ್’ (JeM) ಪಾತ್ರವಿದೆ ಎಂದು ಹೇಳಿತ್ತು. ಆದರೆ ಈಗ ವಿಶ್ವಸಂಸ್ಥೆ ತನ್ನ 38ನೇ ವರದಿಯಲ್ಲಿ ಈ ದಾಳಿಯನ್ನು ಅಧಿಕೃತವಾಗಿ ಎಕ್ಯೂಐಎಸ್ ನಡೆಸಿರುವುದಾಗಿ ಆರೋಪಿಸಿದೆ. ಇದನ್ನೂ ಓದಿ: ಮನೆ ನೋಡಲು ಹೋಗಿದ್ದ ದಂಪತಿ ಮೇಲೆ ಪಿಟ್‌ಬುಲ್ ದಾಳಿ; ವಿಡಿಯೋ ವೈರಲ್

ಆಲ್-ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಹಲವು ವರ್ಷಗಳಿಂದ ರಾಸಾಯನಿಕ ಮತ್ತು ಜೈವಿಕ ಆಯುಧಗಳನ್ನು (Chemical and Biological Weapons) ಅಭಿವೃದ್ಧಿಪಡಿಸಲು ಯತ್ನಿಸುತ್ತಿವೆ.
ಇತ್ತೀಚೆಗೆ ‘ಐಸಿಸ್’ ಪ್ರಕಟಿಸಿದ ಆನ್‌ಲೈನ್ ಮ್ಯಾಗಜೀನ್ ಇನ್ವೇಡ್ (Invade) ನಲ್ಲಿ ಸನೈಡ್ ಹಾಗೂ ಬೊಟುಲಿನಮ್ ಟಾಕ್ಸಿನ್ ನಂತಹ ಅಪಾಯಕಾರಿ ವಿಷಕಾರಿ ರಾಸಾಯನಿಕಗಳನ್ನು ತಯಾರಿಸುವ ಸೂಚನೆಗಳನ್ನು ಹಂಚಿಕೊಳ್ಳಲಾಗಿದೆ. ಐಸಿಸ್-ಕೆ (ISIL-K) ಸಂಘಟನೆಯು ರೈಸಿನ್ (Ricin) ವಿಷ ತಯಾರಿಕೆಯ ಮಾರ್ಗದರ್ಶಿಗಳನ್ನು ಹರಡುತ್ತಿದೆ ಎಂದು ಯುಎನ್‌ಎಸ್‌ಸಿ ವರದಿ ಎಚ್ಚರಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳ ವಿರುದ್ಧ 7,500 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಈ ಚಾರ್ಜ್‌ಶೀಟ್ ಪರಿಶೀಲನೆ ಹಾಗೂ ವಿಚಾರಣೆಯನ್ನು ಆಗಸ್ಟ್ 27 ರಂದು ಕೈಗೆತ್ತಿಕೊಳ್ಳಲಿದೆ. ಈ ಪ್ರಮುಖ ದೋಷಾರೋಪಣಾ ಪಟ್ಟಿಯಲ್ಲಿ 580 ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಸೇರಿಸಲಾಗಿದೆ.
ದಾಳಿ ಹೇಗಾಯ್ತು?
ನವೆಂಬರ್ 2025ರ ಸಂಜೆ ಸುಮಾರು 7 ಗಂಟೆಗೆ ಕೆಂಪುಕೋಟೆಯ ಬಳಿ ಚಲಿಸುತ್ತಿದ್ದ ಹುಂಡೈ i20 (Hyundai i20) ಕಾರಿನಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಉಗ್ರ ಉಮರ್ ಉನ್ ನಬಿ ಎಂಬಾತ ಕಾರನ್ನು ಚಲಾಯಿಸುತ್ತಿದ್ದು, ಆತನೂ ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದ. ಈ ಘಟನೆಯಲ್ಲಿ 11 ಸಾರ್ವಜನಿಕರು ಸಾವನ್ನಪ್ಪಿದ್ದರು.

