-ದೇಶಾದ್ಯಂತ ಸುಮಾರು 8 ಎಫ್ಐಆರ್ ದಾಖಲು
ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಹಾಗೂ ಅದನ್ನು ಸಮರ್ಥಿಸಿಕೊಂಡ ಆರೋಪದ ಮೇಲೆ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನಲ್ಲಿ (Bengaluru) ದಾಖಲಾಗಿದ್ದ ಎಫ್ಐಆರ್ (FIR) ಇದೀಗ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ.
ಕಾಂಗ್ರೆಸ್ ಮುಖಂಡ ರಾಮಪ್ಪ ಎಂಬುವವರು ನಿನ್ನೆ (ಸೆ.4) ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಜೀರೋ ಎಫ್ಐಆರ್ (Zero FIR) ದಾಖಲಾಗಿತ್ತು. ಇದೀಗ ಘಟನೆ ನಡೆದ ಸ್ಥಳ ಆಧರಿಸಿ ಎಫ್ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಈ ವಿವಾದ ಸಂಬಂಧ ದೇಶ್ಯಾದ್ಯಂತ ಸುಮಾರು 8 ಎಫ್ಐಆರ್ಗಳು ದಾಖಲಾಗಿದೆ. ಇದನ್ನೂ ಓದಿ: ಶುದ್ಧೀಕರಣ ವಿವಾದ – ಉತ್ತರಾಖಂಡ ಬಿಜೆಪಿ ಸದಸ್ಯರ ಮೇಲೆ ಎಸ್ಸಿ/ ಎಸ್ಟಿ ಕಾಯ್ದೆಯ ಅಡಿ ಬೆಂಗಳೂರಿನಲ್ಲಿ ಎಫ್ಐಆರ್
ಅಖಿಲ ಭಾರತ ಆದಿವಾಸಿ ಕಾಂಗ್ರೆಸ್ನ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ನೀಡಿದ ಲಿಖಿತ ದೂರಿನ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 196(1)(b), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3(1)(u), ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ (PCR Act) 1955ರ ಸೆಕ್ಷನ್ 7(1)(d), 7(1) ಮತ್ತು 7(c) ಅಡಿಯಲ್ಲಿ ಜೀರೋ ಎಫ್ಐಆರ್ ದಾಖಲಾಗಿತ್ತು.
ದೂರಿನಲ್ಲಿ ಏನಿದೆ?
2026ರ ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ, ಭಾಷಣ ಮಾಡಿದ್ದರು. ಈ ಸಮಾವೇಶ ಮುಗಿದ ನಂತರ, ಆಗಸ್ಟ್ 10ರಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆ ಜಾಗದಲ್ಲಿ ಶುದ್ಧೀಕರಣ ಪೂಜೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ತಾನು ಭಾಷಣ ಮಾಡಿದ ಜಾಗದಲ್ಲಿ ಶುದ್ಧೀಕರಣ ಹೋಮ – ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಖರ್ಗೆ ಕಿಡಿ
ಮಲ್ಲಿಕಾರ್ಜುನ ಖರ್ಗೆ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅವರ ಉಪಸ್ಥಿತಿಯಿಂದಾಗಿ ಮೈದಾನ ಅಪವಿತ್ರಗೊಂಡಿದೆ ಎಂಬಂತೆ ಬಿಂಬಿಸಿ ಅಪಮಾನ ಮಾಡುವ ಉದ್ದೇಶದಿಂದಲೇ ಈ ಶುದ್ಧೀಕರಣ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದು, ದ್ವೇಷ ಹಾಗೂ ಜಾತಿ ತಾರತಮ್ಯವನ್ನು ಉತ್ತೇಜಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಶುದ್ಧೀಕರಣ ವಿವಾದ | 24 ದಿನವಾದರೂ FIR ಇಲ್ಲ – ನಡ್ಡಾಗೆ ಪತ್ರ ಬರೆದ ಖರ್ಗೆ
