ನವದೆಹಲಿ: ಉತ್ತರಾಖಂಡದ (Uttarakhand) ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಸಾರ್ವಜನಿಕ ಸಭೆಯ ಬಳಿಕ ರಾಮಲೀಲಾ ಮೈದಾನದಲ್ಲಿ ನಡೆದ ಶುದ್ಧೀಕರಣದ ವಿಚಾರವಾಗಿ ರಾಜಕೀಯ ವಾಕ್ಸಮರ ಮುಂದುವರಿದಿದೆ. ಪ್ರಕರಣದಲ್ಲಿ ಇನ್ನೂ ಎಫ್‌ಐಆರ್ ದಾಖಲಾಗದಿರುವುದನ್ನು ಪ್ರಶ್ನಿಸಿರುವ ಖರ್ಗೆ, ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ (JP Nadda) ಅವರಿಗೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಆಗಸ್ಟ್ 8ರಂದು ಹಲ್ದ್ವಾನಿಯಲ್ಲಿ ಖರ್ಗೆ ಸಾರ್ವಜನಿಕ ಸಭೆ ನಡೆಸಿದ್ದರು. ಸಭೆ ನಡೆದ ರಾಮಲೀಲಾ ಮೈದಾನದಲ್ಲಿ ಬಳಿಕ ಕೆಲವರು `ಶುದ್ಧೀಕರಣ’ ವಿಧಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು 24 ದಿನಗಳಾದರೂ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ ಎಂದು ಖರ್ಗೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆಯ ಸಿಬ್ಬಂದಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನ
ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದ ಸಂದರ್ಭದಲ್ಲಿ ನಡ್ಡಾ ಅವರು ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಬಿಜೆಪಿ ಇಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಇದೇ ಭರವಸೆಯನ್ನು ಇದೀಗ ಖರ್ಗೆ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡಿ, ಶುದ್ಧೀಕರಣ ನಡೆಸಿದ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ನಡ್ಡಾ ಅವರನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್, ಪಿಕಪ್ ವಾಹನದ ನಡುವೆ ಭೀಕರ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಾಯ
ಈ ಪ್ರಕರಣ ಕೇವಲ ತಮ್ಮ ವೈಯಕ್ತಿಕ ವಿಚಾರ ಅಥವಾ ಕಾಂಗ್ರೆಸ್ ಅಧ್ಯಕ್ಷನಾಗಿ ತಮ್ಮ ಸ್ಥಾನಕ್ಕೆ ಸಂಬಂಧಿಸಿದ್ದಲ್ಲ ಎಂದು ಖರ್ಗೆ ಹೇಳಿದ್ದಾರೆ. ಪ್ರತಿನಿತ್ಯ ತಾರತಮ್ಯದ ವಾಸ್ತವವನ್ನು ಎದುರಿಸುತ್ತಿರುವ ಕೋಟ್ಯಂತರ ಜನರ ಭಾವನೆಗಳಿಗೆ ಇದು ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ. ಇಂತಹ ಕೃತ್ಯ ಎಸಗುವವರಿಗೆ ಕಾನೂನಿನ ಮೂಲಕ ಪಾಠ ಕಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಬನ್ನಂಜೆ ಗೋವಿಂದಾಚಾರ್ಯರ ಬಯೋಪಿಕ್
ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದ ನಾಯಕನಾಗಿರುವ ಹಿನ್ನೆಲೆಯಲ್ಲಿ ಈ ಘಟನೆ ಅವಮಾನಕಾರಿ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ `ಶುದ್ಧೀಕರಣ’ವನ್ನು ಅಸ್ಪೃಶ್ಯತೆಯೊಂದಿಗೆ ಹೋಲಿಸಿ, ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ತಿಹಾರ್ ಜೈಲಿಂದಲೇ ಪತ್ನಿಗೆ ವಿಚ್ಚೇಧನ ನೀಡಲು ಮುಂದಾದ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್
