ಸದ್ಯ ʻಜೈ ಹನುಮಾನ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ರಿಷಬ್ ಶೆಟ್ಟಿ, ಇದೀಗ ಕಾಂತಾರ ಸಿನಿಮಾಗಾಗಿ ಮತ್ತೋರ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

NAB IFFM Awards Night 2026 ರಲ್ಲಿ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಲೀಡರ್ಶಿಪ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ ಹಾಗೂ ನಮ್ಮ ನೆಲದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಅವರ ಪ್ರಯತ್ನಕ್ಕೆ ಈ ಗೌರವ ಸಂದಿದೆ.

ಇದೇ ಸಂದರ್ಭದಲ್ಲಿ ʻಕಾಂತಾರ: ಎ ಲೆಜೆಂಡ್ – ಚಾಪ್ಟರ್ 1ʼ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ತಮ್ಮ ವಿಭಿನ್ನ ಕಥೆ ಹೇಳುವ ಶೈಲಿ ಮತ್ತು ನಿರ್ದೇಶನದ ಮೂಲಕ ಕನ್ನಡದ ಕಥೆಗಳನ್ನು ವಿಶ್ವದ ಪ್ರೇಕ್ಷಕರಿಗೆ ತಲುಪಿಸುತ್ತಿರುವ ಅವರ ಪ್ರಯತ್ನಕ್ಕೆ ಈ ಪ್ರಶಸ್ತಿ ಮತ್ತೊಂದು ಹೆಮ್ಮೆಯ ಗುರುತಾಗಿದೆ.
ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದ್ದು, ಭಾರತೀಯ ಸಿನಿಮಾಗೆ ಅವರು ನೀಡುತ್ತಿರುವ ಕೊಡುಗೆಯನ್ನು ಸಂಭ್ರಮಿಸುವ ವಿಶೇಷ ಕ್ಷಣವಾಗಿದೆ.
