– 15 ದಿನಗಳ ಕಾಲ ಜೈಲಿನಲ್ಲಿದ್ದ ಮಂಜುನಾಥ್
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ತಂಗಿ ಗಂಡ (ಬಾಮೈದ) ಹಾಗೂ ಬಳ್ಳಾರಿಯ ಬಿಜೆಪಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್(Y Manjunath) ಅವರ ನಿವಾಸದ ಮೇಲೆ ಜಾರಿ ನಿರ್ದೇಶನ(ED) ಅಧಿಕಾರಿಗಳ ತಲಾಷ್ ಸತತ 24 ಗಂಟೆಗಳಿಂದ ಮುಂದುವರಿದಿದೆ.
ಬುಧವಾರ ಮುಂಜಾನೆ 5:30ಕ್ಕೆ ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಅವರ ನಿವಾಸಕ್ಕೆ ಲಗ್ಗೆ ಇಟ್ಟ ಬೆಂಗಳೂರು ಮತ್ತು ಗೋವಾ ಇ.ಡಿ ಅಧಿಕಾರಿಗಳ ಜಂಟಿ ತಂಡ, ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದೆ. ಅಧಿಕಾರಿಗಳು ನಿನ್ನೆಯಿಂದ ಮನೆ ಬಿಟ್ಟು ಹೊರಗೆ ಬಂದಿಲ್ಲ.
ತಮಗೆ ಬೇಕಾದ ಉಪಹಾರ ಹಾಗೂ ಊಟವನ್ನು ಮನೆಗೇ ತರಿಸಿಕೊಂಡು ಶೋಧ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಮಂಜುನಾಥ್ ಅವರ ಪತ್ನಿ ಹಾಗೂ ಕುಟುಂಬಸ್ಥರು ಮನೆಯಲ್ಲೇ ಇದ್ದಾರೆ ಎನ್ನಲಾಗಿದೆ.
ಬೆಳಗಾವಿಯ(Belagavi) 6 ಸ್ಥಳಗಳು ಸೇರಿದಂತೆ ರಾಜ್ಯದ ಒಟ್ಟು 10 ಕಡೆಗಳಲ್ಲಿ ಅರೆಸೇನಾ ಪಡೆಗಳ ಬಿಗಿ ಭದ್ರತೆಯೊಂದಿಗೆ ಈ ಬೃಹತ್ ದಾಳಿ ನಡೆದಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್‌ನಲ್ಲಿದ್ದ ವೈ. ಮಂಜುನಾಥ್ ಅವರನ್ನು ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಗಳೇನು?
ಸರ್ಕಾರಿ ಸಂಬಳ ಪಡೆಯುತ್ತಲೇ ಕೋಟ್ಯಂತರ ರೂಪಾಯಿಗಳ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಂಜುನಾಥ್ ಮೇಲಿದೆ. ಆದಾಯಕ್ಕಿಂತ ಅಧಿಕವಾಗಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದನೆ, ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಲೈಸೆನ್ಸ್ ಹೊಂದಿರುವ ಆರೋಪ, ದೇಶದ ಗಡಿ ದಾಟಿ ನಡೆದಿರುವ ಆರ್ಥಿಕ ವಹಿವಾಟುಗಳು, ಹವಾಲಾ ಮಾರ್ಗಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ 1 ನಿಮಿಷದ ಅಂತರದಲ್ಲಿ 7.2, 7.5 ತೀವ್ರತೆಯ ಭೂಕಂಪ – ಕಟ್ಟಡಗಳು ಕುಸಿತ, ಸಾವುನೋವಿನ ಶಂಕೆ
ಜೈಲು ಸೇರಿದ್ದ ಮಂಜುನಾಥ್
ವೈ. ಮಂಜುನಾಥ್ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. 2009ರಿಂದ 2013ರವರೆಗೆ ಮೈಸೂರಿನಲ್ಲಿ ಅಬಕಾರಿ ಡಿಸಿ (DC) ಆಗಿದ್ದ ಅವಧಿಯಲ್ಲಿ ಲಂಚದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ಇವರನ್ನು ಬಂಧಿಸಿದ್ದರು. ಆ ವೇಳೆ 15 ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಇವರು ಬಿಡುಗಡೆಯಾಗಿ ಬಂದಾಗ, ಇವರ ಅಭಿಮಾನಿಗಳು ಜೈಲಿನಿಂದ ಬರೋಬ್ಬರಿ 2 ಕಿಲೋಮೀಟರ್ ದೂರ ಇವರನ್ನು ಹೆಗಲ ಮೇಲೆ (ತೋಳಿನಲ್ಲಿ) ಎತ್ತಿಕೊಂಡು ಮೆರವಣಿಗೆ ಮಾಡಿದ್ದರು. ಈ ಘಟನೆ ಆಗ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಸುದ್ದಿಗೆ ಗ್ರಾಸವಾಗಿತ್ತು.
