ನವದೆಹಲಿ: ದಿವಂಗತ ಬಾಲಿವುಡ್ ನಟ ಧರ್ಮೇಂದ್ರ (Dharmendra) ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು (Padma Awards 2026) ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ (Droupadi Murmu) ನಟಿ ಹೇಮಾ ಮಾಲಿನಿ (Hema Malini) ಪತಿಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಚಿತ್ರರಂಗಕ್ಕೆ ಧರ್ಮೇಂದ್ರ ನೀಡಿದ ಆರು ದಶಕಗಳ ಕೊಡುಗೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಹೇಮಾ ಮಾಲಿನಿ ಗುಲಾಬಿ ಬಣ್ಣದ ಸೀರೆಯಲ್ಲಿ ಗಮನ ಸೆಳೆದರು. ಇದೇ ವೇಳೆ ಪುತ್ರಿ ಅಹಾನಾ ಡಿಯೋಲ್ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: Padma Awards: 66 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಸಮಾರಂಭಕ್ಕೂ ಮುನ್ನ ಮಾತನಾಡಿದ ಹೇಮಾ ಮಾಲಿನಿ, ಧರ್ಮೇಂದ್ರ ಅವರಿಗೆ ಈ ಗೌರವ ಬಹಳ ಹಿಂದೆಯೇ ಸಿಗಬೇಕಿತ್ತು. ಆದರೂ ಈಗ ಸಿಕ್ಕಿರುವುದು ಸಂತೋಷದ ವಿಚಾರ. ಧರ್ಮೇಂದ್ರ ಕೇವಲ ನಟರಲ್ಲ, ಅವರು ಭಾರತೀಯ ಸಿನಿಮಾದ ಒಂದು ಸಂಸ್ಥೆ. ಅವರ ಸರಳತೆ, ಅಭಿನಯ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಜನರ ಮನಸ್ಸು ತಲುಪಿವೆ ಎಂದು ಭಾವುಕರಾಗಿ ಹೇಳಿದರು.
ಚಿತ್ರರಂಗದ ಹೊರತಾಗಿಯೂ ಧರ್ಮೇಂದ್ರ ದೇಶದ ಭಾವನೆ, ಸಂಸ್ಕೃತಿ ಮತ್ತು ಮಾನವೀಯತೆಯ ಪ್ರತೀಕವಾಗಿದ್ದರು ಎಂದು ಅವರು ಹೇಳಿದರು. ಅವರ ಜೊತೆ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ನಂತರ ನಾನು ಅವರ ಜೀವನ ಸಂಗಾತಿಯಾಗಿದ್ದೇ ನನ್ನ ಭಾಗ್ಯ ಎಂದರು.
ಧಮೇಂದ್ರ ಮತ್ತು ಹೇಮಾ ಮಾಲಿನಿ 1980ರ ಮೇ 2ರಂದು ವಿವಾಹವಾಗಿದ್ದರು. ಧರ್ಮೇಂದ್ರ ಅವರು 2025ರ ನವೆಂಬರ್ 24ರಂದು ಮುಂಬೈನ ನಿವಾಸದಲ್ಲಿ ನಿಧನರಾದರು. ಇದನ್ನೂ ಓದಿ: 8 ವರ್ಷಗಳ ಬಳಿಕ BIAL ಡಿವಿಡೆಂಡ್ ಘೋಷಣೆ – ಸರ್ಕಾರಕ್ಕೆ 16.49 ಕೋಟಿ ಚೆಕ್ ಹಸ್ತಾಂತರ
